ಏನಾದರೂ ಆಗು……..
ಏನಾದರೂ ಆಗು………..
ನಡೆವ ಹಾದಿಯ ಹಸಿರಾಗು
ಇಕ್ಕೆಲದಿ ನಗುವ ಹೂವಾಗು
ಗಾಳಿಯ ತುಂಟಾಟಕೆ ನಲಿವ ಎಲೆಯಾಗು
ಏನಾದರೂ ಆಗು…….
ಅಮ್ಮನ ಮಡಿಲಲಿ ಮಲಗಿದ
ಮಗುವಿನ ಕಿರುನಗೆಯಾಗು
ಹಸುವಿನ ಹಿಂದೆ ಓಡುತಲಿರುವ
ಮುದ್ದಿನ ಕರುವಿನ ಓಟವಾಗು
ಏನಾದರೂ ಆಗು…………..
ಹೊಲದಿ ದಣಿದು ಬೆಚ್ಚನೆ ಮನೆ
ಸೇರಲು ಹೊರಟ ಹೆಂಗಳೆಯರ
ಎದೆ ಬಡಿತವಾಗು
ಅಮ್ಮನ ಬರುವನೆ ಕಾಯ್ವ
ಮಗುವಿನ ಬಯಕೆಯಾಗು
ಏನಾದರೂ ಆಗು………..
ವಸಂತದ ಚಿಗುರು ಕಂಡೊಡನೆ
ದನಿಕೆದರುವ ಕೋಗಿಲೆಯ ಕಂಠವಾಗು
ಹುಲಿಯ ಕಂಡೊಡನೆ
ತನ್ನ ಗುಂಪು ಸೇರಲು ತಡಕಾಡುವ
ಹರಿಣದ ತವಕವಾಗು
ಏನಾದರೂ ಆಗು…………….
ಸಾಗರ ಸೇರಲು ಹೊರಟ
ನದಿಯ ರಭಸವಾಗು
ಸುರಿವ ಮಳೆ ಹನಿಯಾಗು
ಚಿಟ್ಟೆಯ ರೆಕ್ಕೆಯ ಬಡಿತವಾಗು
ಏನಾದರೂ ಆಗು…………..
ಏನಾದರಾಗದಿದ್ದರೆ
ಕೊನೆಗೆ
ಉಲ್ಲಾಸ ನೀಡುವ
ಬೆಳಗಿನ, ಸಂಜೆಯ
ಹೊನ್ನ ಕಿರಣವಾಗು
ಏನಾದರೂ ಆಗು…………
-ಸಿದ್ಧರಾಮ ಕೂಡ್ಲಿಗಿ
*****