ಬೆಟ್ಟಕ್ಕೆ ಬೆಟ್ಟವೇ ಅರಳುವಾಗ
ತೂಕದ ಬಟ್ಟು ಜಾರಿಸುವ ವಿಮರ್ಶಕರೇ, ಗುಂಪುಗಾರರೇ, ವಿಶೇಷಗಳಿಲ್ಲದ ವಿಶೇಷಾಂಕಗಳೇ, ನಮ್ಮನ್ನು ಹೊರಗಿಟ್ಟೆವೆಂದು ಹಿರಿ ಹಿರಿ ಹಿಗ್ಗುತ್ತ ಕುಗ್ಗಿದವರೇ, ಪ್ರತಿಭೆಗಳ ಗುಂಡಿ ತೋಡಿ ಮುಚ್ಚಲು ಹೆಣಗಿದವರೇ, ನಿಧಿ ಶೋಧಕರು ಎಲ್ಲೆಡೆ ಇರುವುದನ್ನೇ ಮರೆತವರೇ, ಸಾಂಸ್ಕೃತಿಕ ಸಾರ್ವಭೌಮರೆಂದು ಬರಿದೆ ಭಾವಿಸಿದವರೇ!
ನೀವು ನೆಟ್ಟ ಕೃತಕ ಬೇಲಿಗಳಲ್ಲಿ ನಿಮಗೆಂದೇ ನಾವು ಅರಳಿದವರಲ್ಲ, ಒಂದೊಂದೇ ಹೂ ಕಿತ್ತು ಪ್ರದರ್ಶನಕ್ಕಿಡುವುದರ ಹಂಗು ಬೇಕಿಲ್ಲ, ವೈವಿಧ್ಯವಿರದ ನಿಮ್ಮ ಗಿಡಗಳ ನಡುವೆ ನರಳುವ ಕರ್ಮ ನಮಗೂ ಇಲ್ಲ, ನೀವೇ ನಿರ್ಮಿಸಿದ ಕೃತಕ ದಾರಿಗಳಲ್ಲಿ ನಡೆದು ಗಮ್ಯ ತಲುಪಬೇಕಿಲ್ಲ. ತಲುಪುವುದು ಎನ್ನುವುದಕ್ಕೆ ಅರ್ಥವೂ ಇಲ್ಲ ,ಹುಟ್ಟುತ್ತವೆ ಹಾದಿ, ಹೊಸ ಹೆಜ್ಜೆಗಳು ಕುಲು ಕುಲಿಸುತ್ತವೆ. ಕಾಲಿಟ್ಟದ್ದೇ ನಮ್ಮ ಕಾಲುದಾರಿ!
ವರುಷ ಹನ್ನೆರಡಾದರೇನು? ಈ ಬೆಟ್ಟಕ್ಕೆ ಮೌನ ಕವಿದಾಗ ಮತ್ತೊಂದು ಬೆಟ್ಟ, ಮಂದಾಲ ಪಟ್ಟಿ ಬಾಡಿದರೆ ಮುಳ್ಳಯ್ಯನ ಗಿರಿ! ಬೆಟ್ಟಕ್ಕೆ ಬೆಟ್ಟವೇ ಅರಳುವಾಗ ನಿಮ್ಮ ಕೈ ತೋಟದ ಹೂ ಕೇಳುವವರಾರು?
-ಎಂ. ಆರ್. ಕಮಲ, ಬೆಂಗಳೂರು