ಎಷ್ಟು ಕಷ್ಟವಲ್ಲವೇ
ಸರಳವಾಗಿರುವುದ
ರೂಪಕಗೊಳಿಸುವುದು?
ಹಿಮ ಸುರಿದ ತಾಜಾ ಬೆಳಗಿನಲಿ
ತಂಗಾಳಿ ಮೈಸವರಿದಾಗಿನ ಖುಷಿ
ನಿನ್ನ ನೆನೆದಾಗಲೆಂದು ಹೇಳಲು
ಅದೆಷ್ಟು ಬೇಲಿಗಳಾಚೆ ನಿಲ್ಲಬೇಕು?
ಕಾಡು ಕುಡಿದು ಬಿಟ್ಟ ನೀರು
ದೊಡ್ಡ ಝರಿ
ಸಣ್ಣ ಹೊನಲು
ಹಗಲಿಡೀ ಬೆಳಕಿನ ಕ್ರೀಡೆ
ಉದುರಿದ ಒಣ ಎಲೆಗಳ ಮೇಲೆ
ಸಲೀಸು ಸಾಗುವ ಮಿಗದ ಸದ್ದನಾಲಿಸಿದಾಗೆಲ್ಲ
ನಿನ್ನ ಹೆಜ್ಜೆ ಸಪ್ಪಳದ ನೆನಹ
ನೇರ ಹೇಳಿಬಿಡಲು
ಮೌನ ಮೊನೆಗೂಡದೇ ಇರಲು
ಈ ಕವಿತೆಯ ವ್ಯರ್ಥ ಪ್ರಯಾಸ
ಅನುಭವದ ಹಸಿವ
ಕದ್ದು ಉಣುವವರ ವಠಾರದಲಿ
ರಂಗೋಲಿಗೆ ಬಣ್ಣ ತುಂಬುವುದ ಮರೆತು
ಎದೆಗೆ ಹೊಂದದ ಮಾತುಗಳ
ಬಣ್ಣದಲ್ಲೇ ಮುಳುಗಿಸಿರಲು
ಉಸಿರೆಂದರೆ
ಉಸಿರಷ್ಟೇ
ಕೇಳುವ
ನಿಶ್ಶಬ್ದಕ್ಕಾಗಿ
ಕಾದು ಕುಳಿತಿರುವೆ
-ಮಲ್ಲಿಕಾರ್ಜುನಗೌಡ ತೂಲಹಳ್ಳಿ
*****