ಅ.2ರಂದು ವಿಶ್ರಾಂತ ಡಿಜಿಪಿ ಶಂಕರ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಬಿಡುಗಡೆ: ಹುತಾತ್ಮ ಸಹೋದ್ಯೋಗಿಗಳಿಬ್ಬರಿಗೆ ಕೃತಿ ಅರ್ಪಣೆ

[ವಿಶೇಷ ವರದಿ:ಸಿ.ಮಂಜುನಾಥ್]
ಬಳ್ಳಾರಿ, ಅ.1: ವಿಶ್ರಾಂತ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ) ಶಂಕರ ಮಹಾದೇವ ಬಿದರಿ ಅವರು ತಮ್ಮ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಕೃತಿಯನ್ನು ತಮ್ಮ ಇಬ್ಬರು ಹುತಾತ್ಮ ಸಹೋದ್ಯೋಗಿಗಳಿಬ್ಬರಿಗೆ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.


ಹೌದು! ಕರ್ತವ್ಯ ನಿರ್ವಹಣೆಯಲ್ಲಿ ವೀರಮರಣವನ್ನು ಅಪ್ಪಿರುವ ಪೊಲೀಸ್  ಹುತಾತ್ಮರಾದ ಬಳ್ಳಾರಿಯ ಮಾಲ್ವಿ‌ ಸಿ. ಹನುಮಂತಪ್ಪ ಮತ್ತು ಚೆಂಗಡಿ ಅರಣ್ಯದಲ್ಲಿ ಕುಖ್ಯಾತ ನರ ಹಂತಕ ವೀರಪ್ಪನ್ ತಂಡದ ಜತೆ ಹೋರಾಡುವಾಗ ಜೀವತೆತ್ತ ಹುತಾತ್ಮ ಎಂ.ಕೆ ಪೊನ್ನಪ್ಪ ಅವರಿಗೆ ಸತ್ಯಮೇವ ಜಯತೆ ಕೃತಿಯನ್ನು ಅರ್ಪಿಸಿ ಸಾರ್ಥಕತೆ ಮೆರೆದಿದ್ದಾರೆ.
ಶಂಕರ ಮಹಾದೇವ ಬಿದರಿ ಅವರು 1990ರಲ್ಲಿಅವಿಭಜಿತ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿದ್ದಾಗ ಬಳ್ಳಾರಿ ಸಮೀಪದ ಮುಂಡರಗಿ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ಆಂಧ್ರ‍್ರಪ್ರದೇಶದ ಕುಖ್ಯಾತ ಭಯೋತ್ಪಾದಕ ಭೀಮ್ಲನಾಯಕನ ಮೇಲೆ ನಡೆದ ಪೊಲೀಸ್ ದಾಳಿಯ ಗುಂಡಿನ ಚಕಮಕಿಯಲ್ಲಿ ಎಂ.ಸಿ ಹನುಮಂತಪ್ಪ ಅವರು, ಭೀಮ್ಲನಾಯ್ಕನ ಗುಂಡಿನಿಂದ ಮರಣಾಂತಿಕವಾಗಿ ಗಾಯಗೊಂಡು ಸತತ ಹತ್ತು ದಿನ ಜೀವನ್ಮರಣದ ಹೋರಾಟ ನಡೆಸಿ ವೀರ ಮರಣ ಅಪ್ಪಿದ್ದರು.


1994ರಲ್ಲಿ ನರಹಂತಕ‌ ವೀರಪ್ಪನ್ ವಿರುದ್ಧ ನಡೆದ ಕಾರ್ಯಾಚರಣೆಯ(ಎಸ್.ಟಿ.ಎಫ್) ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರಿಗೆ ಎಂ.ಕೆ ಪೊನ್ನಪ್ಪ ಅಂಗರಕ್ಷಕರಾಗಿದ್ದರು.
ಚೆಂಗಡಿ ಅರಣ್ಯ ಪ್ರದೇಶದಲ್ಲಿ ನಡೆದ ವೀರಪ್ಪನ್ ತಂಡದ ಜತೆ ನಡೆದ ಮುಖಾಮುಖಿ ಘರ್ಷಣೆಯಲ್ಲಿ ವಿಶೇಷ ಮೀಸಲು ಪಡೆಯ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಎಂ. ಕೆ.‌ಪೊನ್ನಪ್ಪ ಗುಂಡೇಟಿನಿಂದ ಹುತಾತ್ಮರಾಗಿದ್ದರು.
ತಮ್ಮ ಜತೆ ಕಾರ್ಯನಿರ್ವಹಿಸುತ್ತಿದ್ದಾಗ ವೀರ ಮರಣ ಅಪ್ಪಿದ ಇಬ್ಬರು ಹುತಾತ್ಮ ಪೊಲೀಸರಿಗೆ ಅರ್ಪಣೆಯ ಗೌರವ ಸಲ್ಲಿಸಿರುವ ಸಲ್ಲಿಸಿರುವ ಶಂಕರ ಬಿದರಿ ಅವರ ಕಾರ್ಯವನ್ನು ಪ್ರಜ್ಞಾವಂತರು‌ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.


ಅ. 2 ರಂದು ಗಾಂಧಿ ಜಯಂತಿ ದಿನದಂದು ಭಾನುವಾರ ಮಧ್ಯಾಹ್ನ 3ಗಂಟೆಗೆ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ‘ಸತ್ಯಮೇವ ಜಯತೇ’ ಕೃತಿ ಬಿಡುಗಡೆಯಾಗಲಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ, ಸಂಶೋಧಕ ಡಾ. ಗುರುಲಿಂಗ ಕಾಪಸೆ, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅನಿಲ್ ವಿನಾಯಕ ಗೋಕಾಕ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಪುಸ್ತಕ‌ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬಿದರಿ ಅವರ ಆತ್ಮಚರಿತ್ರೆ ಸುಮಾರು 730 ಪುಟಗಳನ್ನು ಒಳಗೊಂಡಿದ್ದು,
ಸುದೀರ್ಘ ನಾಲ್ಕು ದಶಕಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಶಂಕರ‌ ಬಿದರಿ ಅವರು ಹಲವು ರೋಚಕ ವಿಷಯಗಳನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳ್ಳಾರಿಯ ಹುತಾತ್ಮ ಮಾಲ್ವಿ ಸಿ. ಹನುಮಂತಪ್ಪ ಅವರ ಕುಟುಂಬದ ಸದಸ್ಯರನ್ನು ಬಿದರಿ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ಹುತಾತ್ಮ ಹನುಮಂತಪ್ಪ ಅವರ ಪತ್ನಿ ಶ್ರೀಮತಿ ಕಮಲಮ್ಮ, ಪುತ್ರ ವಾಸು ಹಾಗೂ ಇವರ ಪುತ್ರಿ ಬೆಂಗಳೂರಿಗೆ ಶನಿವಾರ ರಾತ್ರಿ
ಪ್ರಯಾಣ ಬೆಳೆಸಿರುವ ಮಾಹಿತಿ ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಲಭಿಸಿದೆ.
*****