ಅನುದಿನ ಕವನ-೬೪೦, ಕವಯತ್ರಿ: ರಂಹೊ, ತುಮಕೂರು

ಅಹಿಂಸೆಯೇ ಧರ್ಮ ಎಂದಿರಿ
ನಮ್ಮದು ಇಂಗದ ನೆತ್ತರ ದಾಹ!

ಸತ್ಯ ಕಾಣುವ ನೋಟ ತೊಡಿಸಿದಿರಿ
ನಾವು ನಿಜದ ನೆತ್ತಿ ಮೇಲೆ
ಸುಳ್ಳುಗಳನ್ನು ಪ್ರತಿಷ್ಠಾಪಿಸುತ್ತೇವೆ!

ಊರುಗೋಲಾಗುವುದು ಬದುಕು ಎಂದಿರಿ
ಬಿದ್ದವರೆದೆಯ ಮೇಲೆ ನಮ್ಮ
ಕನಸುಗಳು ಅರಳುತ್ತವೆ!

ಬೆತ್ತಲೆ ಫಕೀರನಾಗಿ ಬೆಳಕು ಚಲ್ಲಿದಿರಿ
ಬೆಳಕನ್ನೇ ಕೊಲ್ಲುವ ನಾವು
ಸಾಧಕರೆನಿಸಿಕೊಳ್ಳುತ್ತೇವೆ!

ಸರಳತೆಯೇ ಸೌಂದರ್ಯ ಎಂದಿರಿ
ನಾವು ‘ಯಾರೆಂದು’ ನೋಡಿ
ಮನ್ನಣೆ ನೀಡುತ್ತೇವೆ!

ಶಾಂತಿ ಸಾರಿದಿರಿ…
ಅರ್ಥಹೀನ ಕಾದುವಿಕೆಯನ್ನೇ
ನಾವು ಕ್ರಾಂತಿ ಎನ್ನುತ್ತೇವೆ!

ಕ್ಷಮಿಸಿ ಬಾಪೂ…
ನಿಮ್ಮ ದಾರಿ ನಮ್ಮದಾಗದ್ದಕ್ಕೆ
ವಿಷಾದವಿಲ್ಲದೆ ನಿರುಮ್ಮಳ
ಉಸಿರಾಡುತ್ತೇವೆ!!!

-ರಂಹೊ (ರಂಗಮ್ಮ ಹೊದೇಕಲ್, ತುಮಕೂರು)

*****