ಅನುದಿನ ಕವನ-೬೪೧, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು

ನಿಮ್ಮದೊಂದು ಕವಿತೆ ಕಡ ಕೊಡುವಿರಾ?
ಎದೆ ಬತ್ತಿ ಬರ ಬಂದಿದೆ
ಜಾಣತನದ ಮುಳ್ಳುಕಂಟಿ ಮಾತ್ರವೇ
ನನ್ನಲ್ಲಿದೆ.

ನಿಮ್ಮೊಲ್ಲೊಂದು ಬೇಲಿ ಹೂ ಇದ್ದರೆ, ನನಗೆ
ಕಡ ಕೊಡುವಿರಾ…?

ಬೆಳಕು ಹರಿದು ನನ್ನ ಕಣಕಣ-
ದಲ್ಲಿ ತೂರುವಂತಹ
ಕವಿತೆ ನಿಮ್ಮಲ್ಲಿದ್ದರೆ ಕಡ ಕೊಡುವಿರಾ ?

ಒಂಟಿಯಾಗಿ ಕೂತು ಇರುಳು ಪೂರ್ತಿ
ನಕ್ಷತ್ರ ನೋಡುತ್ತ
ಗುನುಗಬೇಕು, ಶ್ರುತಿ ಹಿಡಿದು ಹಾಡಬೇಕು.

ಯೋಚಿಸುವ ಮುನ್ನ,
ನಿಮ್ಮೊಳಗೆ ಹುಟ್ಟಿದ
ನಿಮ್ಮದೇ ಕವಿತೆಯೊಂದು ನಿಮ್ಮ ಎದೆಯೊಳಗಿದ್ದರೆ,
ಒಂದೇ
ಒಂದು ರಾತ್ರಿಗೆ, ಕಡ ಕೊಡುವಿರಾ, ಇಲ್ಲ
ಕವಿತೆಯೇ ನೀವಾಗುವಿರಾ…?

-ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು