ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ. 17% ಪರಿಶಿಷ್ಟ ಪಂಗಡಕ್ಕೆ ಶೇ.7% ಮೀಸಲಾತಿ ಹೆಚ್ಚಿಸಲು ಒಮ್ಮತದ ತೀರ್ಮಾನ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅ.7: ದಶಕಗಳ ನ್ಯಾಯಸಮ್ಮತವಾದ ಬೇಡಿಕೆ, ಸಂವಿಧಾನದಲ್ಲಿ ಹೇಳಿರುವಂತೆ  ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಂತೆ  ಪರಿಶಿಷ್ಟ ಜಾತಿಗೆ ಶೇ 15 ರಷ್ಟಿದ್ದ ಮೀಸಲಾತಿಯನ್ನು ಶೇ. 17% ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ  ಶೇ 3 ರಿಂದ ಶೇ.7%  ಕ್ಕೆ  ಮೀಸಲಾತಿ ಹೆಚ್ಚಿಸಲು ಒಮ್ಮತದ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸಲು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸಲ್ಲಿಸಿರುವ ವರದಿ ಕುರಿತು  ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಾಮಾಜಿಕ ನ್ಯಾಯ: ಸಭೆಯ ಪೂರ್ವದಲ್ಲಿ ಜರುಗಿದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರೊಂದಿಗೆ ಚರ್ಚಿಸಲಾಗಿದೆ. ಸಾಮಾಜಿಕ ನ್ಯಾಯಕ್ಕೆ ಪಕ್ಷದ ಬದ್ಧತೆಯನ್ನು ಮುಂದುವರೆಸಬೇಕು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಕ್ರಮ ಕೈಗೊಂಡು, ಕಾನೂನಾತ್ಮಕ ಕ್ರಮಗಳನ್ನೂ ತೆಗೆದುಕೊಳ್ಳಲು ನಿರ್ಣಯ ಮಾಡಲಾಗಿತ್ತು ಎಂದರು.
ನಾಳೆಯೇ ಸರ್ಕಾರದ ಆದೇಶ: ಸರ್ವಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಅದರ ಅನುಷ್ಠಾನಕ್ಕೆ ನಮ್ಮ ಸರ್ಕಾರ ಮುಂದಾಗಿದೆ.  ಶನಿವಾರವೇ ಸಚಿವ ಸಂಪುಟ ಸಭೆ ಕರೆದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಎಲ್ಲಾ  ಶಿಫಾರಸ್ಸುಗಳನ್ನು ಚರ್ಚಿಸಿ ಅಂತಿಮವಾದ ಸರ್ಕಾರದ ಕಾರ್ಯಾದೇಶವನ್ನು ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಒಳಮೀಸಲಾತಿ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನ: ಇದರ ಜೊತೆಗೆ ಇನ್ನೂ ಹತ್ತು ಹಲವಾರು ಬೇಡಿಕೆಗಳಿವೆ. ಮೀಸಲಾತಿಯ ಬಗ್ಗೆ ನಾವೆಲ್ಲರೂ ಚಿಂತನೆ ಮಾಡುವ ಅವಶ್ಯಕತೆ ಇದೆ. ಎಲ್ಲಾ ಸಮಾಜದಲ್ಲಿ, ಎಲ್ಲಾ ಜನಾಂಗಗಳಲ್ಲಿಯೂ ಆಕಾಂಕ್ಷೆಗಳು  ಹೆಚ್ಚಾಗಿವೆ.  ಎಸ್.ಸಿ./ಎಸ್.ಟಿ ಸಮುದಾಯದೊಳಗೆ ಕೆಲಸವರಿಗೆ ನ್ಯಾಯ ದೊರೆತಿಲ್ಲ ಎನ್ನುವ ಒಂದು ಕೂಗಿದೆ. ಅದರ ಬಗ್ಗೆಯೂ ಕೂಡ ಈಗಾಗಲೇ ಆಯೋಗಗಳು ತೀರ್ಮಾನ ನೀಡಿರುವ ಹಿನ್ನೆಲೆಯಲ್ಲಿ ಅದನ್ನೂ ಕೂಡ  ಸಮಗ್ರವಾಗಿ ಅಧ್ಯಯನ ಮಾಡಿ, ಒಳ್ಳೆಯ ತೀರ್ಮಾನ ಮಾಡಲು ಸರ್ಕಾರ ಮುಂದಾಗಲಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಆ ನಿಟ್ಟಿನಲ್ಲಿಯೂ ಎಸ್.ಸಿ./ಎಸ್.ಟಿ ಒಳಮೀಸಲಾತಿಗೂ ಕೂಡ ಎಲ್ಲರೊಂದಿಗೆ ಚರ್ಚಿಸಿ, ಯಾವುದೇ ಸಮಾಜಕ್ಕೆ  ಅನ್ಯಾಯವಾಗದಂತೆ, ಕೈಬಿಡದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಎಲ್ಲಾ ಪಕ್ಷಗಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಹಿಂದುಳಿದ  ವರ್ಗಗಳ  ಮೀಸಲಾತಿ ಬಗ್ಗೆ ನಡೆಯುತ್ತಿರುವ  ಚರ್ಚೆ ಬಗ್ಗೆಯೂ ವರದಿಗಳನ್ನು ಆಧರಿಸಿ  ಆಯಾ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಮುಂದಾಗಲಿದೆ ಎಂದರು.                                                    ಈಗಿರುವ  ಯಾವುದೇ ಮೀಸಲಾತಿ ಕಡಿಮೆಯಾಗುವುದಿಲ್ಲ. ರಾಜ್ಯದಲ್ಲಿ ಶೇ 50 ರಷ್ಟು ಮೀಸಲಾತಿ ಇದ್ದು,  ಎಸ್. ಸಿ, ಎಸ್.ಟಿ, ಪ್ರವರ್ಗ 1, 2 ಎ, ಮತ್ತು ಬಿ ಯಾರಿಗೂ ಮೀಸಲಾತಿ ಪ್ರಮಾಣ ಕಡಿಮೆಯಾಗುವುದಿಲ್ಲ. ಇದು  ಶೇ 50 ಕ್ಕಿಂತಲೂ ಜಾಸ್ತಿ ಇರುವವರಿಗೆ ನೀಡುವ  ಮೀಸಲಾತಿ. ಅದೇ ನ್ಯಾ. ನಾಗಮೋಹನ್ ದಾಸ್ ಸಮಿತಿ ಹೇಳಿದೆ ಎಂದರು.                                            ಅನ್ಯಾಯವಾಗದಂತೆ ಮೀಸಲಾತಿ: ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ 10 ರಷ್ಟು ಮೀಸಲಾತಿಯನ್ನು  ಕಾನೂನಿನ ಪ್ರಕಾರ  ಮೀಸಲಾತಿ ಇಲ್ಲದಿರುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನೀಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಆದರೆ ಅದು  ಸರ್ವೋಚ್ಛ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ತೀರ್ಪು ಬರುತ್ತಲೇ   ಆದೇಶದನ್ವಯ ಅನುಷ್ಠಾನ ಮಾಡಲಾಗುವುದು. ಯಾರಿಗೂ ಅನ್ಯಾವಾಗದಂತೆ ಮೀಸಲಾತಿ ನೀಡುವುದೇ  ನಿಜವಾದ ನ್ಯಾಯ ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

*****