ದೇಶದ ಅಭಿವೃದ್ದಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಗತಿಯ ಮೇಲೆ ನಿಂತಿದೆ -ಡಾ.ಅಂಬಳಿಕೆ ಹಿರಿಯಣ್ಣ

ಬಳ್ಳಾರಿ, ಅ.13: ದೇಶದ ಅಭಿವೃದ್ದಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಗತಿಯ ಮೇಲೆ ನಿಂತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ  ಅವರು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ದೂರಶಿಕ್ಷಣ ನಿರ್ದೇಶನಾಲಯ ವತಿಯಿಂದ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ‌ ಸಂಪರ್ಕ ತರಗತಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸಮಾಜಮುಖಿಯಾಗಿ ನಡೆದಾಗ ಮಾತ್ರ ಸೇವಾ ವಲಯ ರೂಪಿತವಾಗುವುದು. ಮಾನವೀಯ ನೆಲೆಯ ಜ್ಞಾನ ಸಮಾಜ ನಿರ್ಮಾಣದಲ್ಲಿ ವಿಶ್ವವಿದ್ಯಾಲಗಳ ಜವಾಬ್ದಾರಿ ಮಹತ್ತರವಾದುದು ಎಂದು
ಅಭಿಪ್ರಾಯಪಟ್ಟರು.
ಪ್ರಸ್ತುತ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕವಾದ ಬುದ್ದಿ, ಆಧುನಿಕ ಸರಕುಗಳ ಸಂಪಾದನೆಯೆ ಶಿಕ್ಷಣ ಎಂಬತಾಗಿದೆ. ನಿಜವಾದ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಬುದ್ಧಿ-ಭಾವ ಗರಿಗೆದರುವಂತೆ ಮಾಡುವ ಮೂಲಕ ಸಮನ್ವಯ, ಸಾಮರಸ್ಯ ದೃಷ್ಠಿಕೋನವನ್ನು ಬೆಳಸಬೇಕು. ಜೊತೆಗೆ ಪಡೆಯುವ ಶಿಕ್ಷಣ ಕಾಯಕದ ಮಹತ್ವವನ್ನು ಹೆಚ್ಚಿಸಬೇಕು. ಸಂಪರ್ಕ ಶಿಬಿರದಲ್ಲಿ ಹತ್ತು ತಿಂಗಳಲ್ಲಿ ಮಾಡುವ ಪಾಠವನ್ನು ಹತ್ತು ದಿನಗಳಲ್ಲಿ ಕಲಿಸುವುದು ಅಧ್ಯಾಪಕರಿಗೆ ಸವಾಲಿನ ಕೆಲಸˌಈ ಸಂಪರ್ಕ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸಂವಾದದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಅನುಮಾನಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ವಿ. ಉಷಾದೇವಿ  ಅವರು ಮಾತನಾಡಿ, ಶಿಕ್ಷಣ ಒಂದು ಅಸ್ತ್ರ, ಶಕ್ತಿ ಮತ್ತು ನಮ್ಮ ಹಕ್ಕು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ. ಈ ಹಿಂದೆ ಮಹಿಳೆಯರಿಗೆ ಶಿಕ್ಷಣ ಪಡೆಯುವುದು ಕಷ್ಟದಾಯಕವಾಗಿತ್ತು. ಆದರೆ ಈಗ ದೂರ ಶಿಕ್ಷಣದ ಮೂಲಕ ಲಕ್ಷಾಂತರ ಮಹಿಳೆಯರು ಜ್ಞಾನ ಪಡೆದುಕೊಳ್ಳುವ ಮೂಲಕ ವೃತ್ತಿ ಜೀವನವನ್ನು ರೂಪಿಸಿಕೊಳ್ಳುತ್ತಿರುವುದು ಶ್ಲಾಘನೀಯ  ಕಾರ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯದಿಂದ ಅನೇಕ ವಿಧ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸಂಪರ್ಕ ತರಗತಿಗಳಿಗೆ ಆಗಮಿಸಿರುವಂತಹ ವಿದ್ಯಾರ್ಥಿಗಳು ಹತ್ತು ದಿನದಲ್ಲಿ ಅಮೂಲ್ಯ ಜ್ಞಾನ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ಎನ್ ಚಿನ್ನಸ್ವಾಮಿ ಸೋಸಲೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಎ ಸುಬ್ಬಣ್ಣ ರೈ, ಸಂಪರ್ಕ ತರಗತಿಗಳ ಸಂಚಾಲಕರಾದ ಡಾ.ಎಚ್ ಡಿ ಪ್ರಶಾಂತ್, ಡಾ.ಮಲ್ಲಿಕಾರ್ಜುನಗೌಡˌ ಡಾ.ಬಿ.ಟಿ. ಮುದ್ದೇಶ್ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಶೋಧನಾರ್ಥಿ ಮಣಿಕಂಠ ಹಂಗಳ ನಿರೂಪಿಸಿದರು. ಮಕ್ಬುಲ್ ಬೇಗಂ ವಂದಿಸಿದರು
*****