(ಸಿ.ಮಂಜುನಾಥ್)
ಬಳ್ಳಾರಿ, ಅ.15: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ದುರಾಡಳಿತ, ಜನವಿರೋಧಿ ನೀತಿಗಳಿಂದ ದೇಶದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಟೀಕಿಸಿದರು.
ಭಾರತ್ ಜೋಡೋ ಯಾತ್ರೆಯ ಅಂಗವಾಗಿ ನಗರದ ಐತಿಹಾಸಿಕ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 40% ಕಮೀಷನ್ ಸರಕಾರವಿದೆ. ಯಾವುದೇ ಕಾರ್ಯಗಳಿಗೂ ಶೇಕಡಾ ನಲವತ್ತುರಷ್ಟು ಕಮೀಷನ್ ನೀಡಬೇಕಿದೆ ಎಂದು ಆರೋಪಿಸಿದರು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. 2014ರಲ್ಲಿ 400 ರೂ. ಇದ್ದ ಗ್ಯಾಸ್ ಸಿಲಿಂಡರ್ ದರ ಒಂದು ಸಾವಿರ ರೂ. ಆಗಿದೆ. 400 ರೂ. ದರವಿದ್ದಾಗ ಯುಪಿಎ ಸರಕಾರವನ್ನು ಟೀಕಿಸುತ್ತಿದ್ದ ನರೇಂದ್ರ ಮೋದಿಅವರು ಪ್ರಸ್ತುತ ಬೆಲೆ ಏರಿಕೆ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಈ ಬಗ್ಗೆ ಜನತೆಗೆ ಪ್ರಧಾನಿಗಳು ಉತ್ತರ ಕೊಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
ನಾಡಿನ ರೈತರಿಗೆ ಸರಕಾರದಿಂದ ಕನಿಷ್ಡ ಬೆಂಬಲ ಸಿಗುತ್ತಿಲ್ಲ. ಗೊಬ್ಬರಕ್ಕೂ ಜಿಎಸ್ ಟಿ ತೆರಿಗೆ ಪಾವತಿಸುತ್ತಿದ್ದಾರೆ. ಟ್ರಾಕ್ಟರ್ ಖರೀದಿಸಲು ಶೇ. 12 ರಿಂದ 15 ರಷ್ಟು ತೆರಿಗೆ ತೆರಬೇಕಿದೆ ಎಂದು ತಿಳಿಸಿದರು.
ಎರಡು ಸರಕಾರಗಳು ಪರಿಶಿಷ್ಟ ಜಾತಿ, ಪ. ಪಂಗಡದ ಸಮುದಾಯದ ವಿರೋಧಿಗಳಾಗಿವೆ. ಶೇ.50 ರಷ್ಟು ದೌರ್ಜನ್ಯಗಳು ದಾಖಲರಾಗಿರುವುದೇ ಸಾಕ್ಷಿ ಎಂದ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಈ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ 8000 ಕೋಟಿ ಹಣವನ್ನು ಬೇರೆ ಕಾರಣಗಳಿಗೆ ಉಪಯೋಗಿಸಲಾಗಿದೆ ಎಂದು ತರಾಟೆಗೆ ತೆಗೆದು ಕೊಂಡರು.
ಕಾಂಗ್ರೆಸ್ ಸರಕಾರವೇ ಎಸ್.ಸಿ-ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಲು ನ್ಯಾ.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು ಎಂದು ನೆನಪಿಸಿದರು. ಬರೀ ಘೋಷಿಸಿದರೆ ಸಾಲದು ವಿಳಂಬ ಮಾಡದೇ ಬಿಜೆಪಿ ಸರಕಾರ ಯಾವುದೇ ಕಾರಣ ಹೇಳದೇ ಜಾರಿಮಾಡಲು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಯುಪಿಎ ಸರಕಾರ 371ಜೆ ಕಾಲಂ ಜಾರಿಗೆ ತಂದಿದ್ದರಿಂದ ಈ ಭಾಗಕ್ಕೆ ಸಾವಿರಾರು ಕೋಟಿ ರೂ. ಅನುದಾನ ದೊರೆಯುತ್ತಿದೆ. ಈ ಭಾಗದ ಲಕ್ಷಾಂತರ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್, ಕೃಷಿ ಇತರೆ ಪದವೀಧರರಾಗುತ್ತಿರುವುದು, ಸರಕಾರಿ ಉದ್ಯೋಗಿಗಳಾಗುತ್ತಿರುವುದು ಯುಪಿಎ ಸರಕಾರದ ಕೊಡುಗೆ ಎಂದು ಹೇಳಿದರು.
ಕರ್ನಾಟಕ ವಿಶೇಷವಾಗಿ ಬಳ್ಳಾರಿ ಜತೆ ತಮ್ಮ ಕುಟುಂಬ ಪರಿವಾರದ ಅವಿನಾಭಾವ ಸಂಬಂಧವಿದೆ ಎಂದ ರಾಹುಲ್ ಗಾಂಧಿ ಅವರು 1999ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಬಳ್ಳಾರಿ ಕ್ಷೇತ್ರದ ಜನತೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದರು. ತಮ್ಮ ಅಜ್ಜಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರಿನಿಂದ ಗೆಲವು ಸಾಧಿಸಿದ್ದರು ಎಂದು ಸ್ಮರಿಸಿ ಹರ್ಷ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ವಿದ್ಯಾರ್ಥಿ-ಯುವಜನತೆ, ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ಭೇಟಿಮಾಡಿ, ಸಂವಾದಿಸುತ್ತಿದ್ದು, ಇವರ ಎಲ್ಲಾ ಸಂಕಷ್ಟಗಳನ್ನು ಅರಿಯಲು ಸಾಧ್ಯವಾಗುತ್ತಿದೆ. ತಮ್ಮ ಸರಕಾರ ಚುನಾಯಿತವಾಗುತ್ತಲೇ ಎಲ್ಲರಿಗೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ಪಾದ ಯಾತ್ರೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಅವರು ಮಕ್ಕಳು, ಮಹಿಳೆಯರು, ಯುವಕರು, ಎಲ್ಲಾ ವರ್ಗದ ಜನರು ತಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಮುಖ್ಯ ಮಂತ್ರಿ ಅಶೋಕ್ ಗೆಲ್ಹೋಟ್, ಛತ್ತೀಸ್ ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್, ಮಧ್ಯಪ್ರದೇಶದ ನಿಕಟಪೂರ್ವ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರುಗಳಾದ ಈಶ್ವರ ಖಂಡ್ರೆ, ಧ್ರುವ ನಾರಾಯಣ, ಸತೀಶ ಜಾರಕಿಹೊಳಿ, ವಿಧಾನ ಸಭೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಬಿ. ಕೆ ಹರಿ ಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ್,ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಎಂ. ದಿವಾಕರ ಬಾಬು, ಶಾಸಕರುಗಳಾದ ಬಿ.ನಾಗೇಂದ್ರ, ಟಿ. ತುಕಾರಾಂ, ಭೀಮನಾಯ್ಕ್, ಪಿಟಿ ಪರಮೇಶ್ವರ ನಾಯಕ್, ಜೆ.ಎನ್ ಗಣೇಶ್ ಸೇರಿದಂತೆ ಪಕ್ಷದ ಗಣ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
*****