ಕೊಪ್ಪಳ: ಮನೆಯ ಬಾಗಿಲು ಇದೇ ದಿಕ್ಕಿಗಿರಬೇಕು. ಗೋಡೆಗಳನ್ನು ಕಲ್ಲಿನಲ್ಲಿಯೇ ಕಟ್ಟಬೇಕು. ನೆಲಕ್ಕೆ ಇಂತಿಂಥ ಟೈಲ್ಸ್ ಗಳನ್ನೇ ಹಾಕಬೇಕು. ಇದೇ ಕಂಪನಿಯ ಸಿಮೆಂಟ್ ಬಳಕೆಯಾಗಬೇಕು ಎಂಬ ಇತ್ಯಾದಿ ಆಲೋಚನೆಗಳನ್ನು ಮನೆ ಕಟ್ಟುವಾಗ ಮಾಡುವುದು ಸಹಜ. ಆದರೆ ಇಲ್ಲೊಬ್ಬರು ಸಿಕ್ಕ ಸಿಕ್ಕ ಚಿಂದಿ ಬಟ್ಟೆಗಳು, ಹಳೆಯ ಸೀರೆಗಳು, ಹಳೆಯ ಫ್ಲೆಕ್ಸುಗಳು, ಹರಿದ ತಾಡಪತ್ರೆಗಳನ್ನೇ ಹೊದಿಸಿ ಸೂರೊಂದನ್ನು ತಯಾರುಮಾಡಿಕೊಂಡಿದ್ದಾರೆ. ಇದೇನು ಅವರ ಕುಶಲತೆ ಅಂದುಕೊಳ್ಳಬೇಡಿ. ಇದು ಬಡತನದ ಅನಿವಾರ್ಯತೆ.
ಹೌದು ಫಕೀರಪ್ಪ ದೊಡ್ಡಮನಿ ಎಂಬುವವರೇ ಮೆಹಬೂಬ್ ನಗರದ ಹಿಂಭಾಗದ ಪ್ರದೇಶದಲ್ಲಿ ಇಂಥದ್ದೊಂದು ಮನೆಯನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಕಳೆದ 16 ವರ್ಷಗಳಿಂದ ಐವರು ಜನರಿರುವ ಈ ಕುಟುಂಬ ಇಲ್ಲಿಯೇ ವಾಸ ಮಾಡುತ್ತಿದೆ. ಅವರು ವಾಸಿಸುತ್ತಿರುವ ಈ ಜಾಗ ಯಾವ ಪುಣ್ಯಾತ್ಮರದು ಅಂತಾನೂ ಗೊತ್ತಿಲ್ಲ. ಮಳೆ ಬಂತೆಂದರೆ ನೀರೆಲ್ಲ ಗುಡಿಸಲಿನೊಳಗೇ ನುಗ್ಗಿಬಿಡುತ್ತದೆ. ಹುಳು ಹುಪ್ಪಟೆಗಳ ಕಾಟ ಬೇರೆ. ಜೀವಭಯದಲ್ಲಿಯೇ ಆ ರಾತ್ರಿ ಕಳೆಯಬೇಕಾದ ಅನಿವಾರ್ಯತೆ ಇವರಿಗಿದೆ.
ಸರ್ಕಾರಿ ಕಛೇರಿಗಳಿಗೆ ಹಲವು ಬಾರಿ ಎಡತಾಕಿದರೂ ರೇಷನ್ ಕಾರ್ಡು ಸಹ ಇವರಿಗೆ ದೊರಕಿಲ್ಲ. ಈವರೆಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳೂ ಇವರನ್ನು ಮಾತನಾಡಿಸಿಲ್ಲ. ಅಕ್ಕಪಕ್ಕದ ಮನೆಯವರ ತುಸು ಸಹಾಯ ಬಿಟ್ಟರೆ ಬೇರೇನೂ ಇವರಿಗೆ ದೊರೆತಿಲ್ಲ.
ಸರ್ಕಾರ ವಸತಿ ಯೋಜನೆಗಳನ್ನೇನೋ ಘೋಷಿಸುತ್ತದೆ. ಹಾಗೋ ಹೀಗೋ ಮಾಡಿ ಅದರಲ್ಲಿ ಕೆಲ ಮನೆಗಳೂ ನಿರ್ಮಾಣವಾಗುತ್ತವೆ. ಆ ಆಶ್ರಯ ಮನೆಗಳಲ್ಲಿ ಹೆಚ್ಚಿನವು ಹಣ ನೀಡಿ ಕೊಳ್ಳುವ ಉಳ್ಳವರ ಸ್ವತ್ತಾಗಿಬಿಡುತ್ತವೆ ಎಂಬುದು ವಿಪರ್ಯಾಸ. ಹೀಗೆ ಆದಲ್ಲಿ ಸೂರಿನ ಅತ್ಯವಶ್ಯಕತೆ ಇರುವ ಇಂಥವರನ್ನು ಆ ಯೋಜನೆಗಳು ಅದ್ಯಾವಾಗ ತಲುಪಬೇಕು?
-ಪ್ರಕಾಶ ಕಂದಕೂರ, ಕೊಪ್ಪಳ