ಅನುದಿನ ಕವನ-೬೫೩, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ ಕಾವ್ಯ ಪ್ರಕಾರ: ಗಜಲ್

ಗಝಲ್

ನೋವಿನಲ್ಲಿ ನರಳುತ್ತ ಬೆಂಡಾಗಿದ್ದೇನೆ
ಒಪ್ಪಿಕೋ ನನ್ನ
ತೊರೆಯ ನೀರಿನಲ್ಲಿ ಜೊಂಡಾಗಿದ್ದೇನೆ
ಒಪ್ಪಿಕೋ ನನ್ನ

ಇರುಳು ಹಗಲುಗಳೆರಡು ಸವೆಯದೆ
ಕೂತಿವೆಯೇಕೆ
ಕಾಂತಾರದ ಕಲ್ಲಿನಂತೆ ಭಂಡಾಗಿದ್ದೇನೆ
ಒಪ್ಪಿಕೋ ನನ್ನ

ಬೆರಗುಗೊಳಿಸಿ ಹೊರಟೆ ಹೃದಯವನ್ನು
ಬರಿದು ಮಾಡಿ
ಹಠಮಾರಿ ಮಗುವಂತೆ ಮೊಂಡಾಗಿದ್ದೇನೆ
ಒಪ್ಪಿಕೋ ನನ್ನ

ಮಾತಿಗೆ ಪ್ರತ್ಯುತ್ತರವನು ನೀಡದೆಯೆ
ಮೌನ ತೋರುವೆಯಲ್ಲ
ಕೊರೆದಿಟ್ಟ ಸೌದೆಯ ತುಂಡಾಗಿದ್ದೇನೆ
ಒಪ್ಪಿಕೋ ನನ್ನ

ಉಭಯವಳಿದು ಅಂತ್ಯವ ಅರಸುತಿಹ
ನೊಂದ ಜೀವವಿದು
ಅಭಿನವನ ಪ್ರೀತಿ ಸಿಗದೆ ದಂಡಾಗಿದ್ದೇನೆ
ಒಪ್ಪಿಕೋ ನನ್ನ

-ಶಂಕರಾನಂದ ಹೆಬ್ಬಾಳ, ಇಳಕಲ್