ಭಾರತ್ ಜೋಡೋ ಯಾತ್ರೆ: ಮೋಕದ ಬಳಿ ವಿದ್ಯುತ್ ಅವಘಡ, ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

ಬಳ್ಳಾರಿ, ಅ.16: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವೇಳೆ ವಿದ್ಯುತ್ ಅವಘಡ ಮೋಕ ಬಳಿ ಸಂಭವಿಸಿದ್ದು ಗ್ರಾಪಂ ಅಧ್ಯಕ್ಷ ರಾಮಣ್ಣ ಸೇರಿ ಐವರಿಗೆ ಗಾಯವಾಗಿದೆ.
ಜಿಲ್ಲೆಯ ಸಂಗನಕಲ್ಲು ಹೊರ ವಲಯದಿಂದ ಶನಿವಾರ ಬೆಳಿಗ್ಗೆ ಮೋಕ ಗ್ರಾಮಕ್ಕೆ ಪಾದಯಾತ್ರೆ ಸಾಗುತ್ತಿರುವಾಗ ಗ್ರಾಮದ ಡೊಡ್ಡ ಮೋರಿ ಬಳಿ ಈ ಘಟನೆ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.


ಕಾಲ್ನಡಿಗೆಯಲ್ಲಿ ಸಾಗಿದ್ದ ಯಾತ್ರಿಯೊಬ್ಬರು ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ರಾಡ್ ಹೊಂದಿದ್ದ ರಾಷ್ಟ್ರ ಧ್ವಜ ವಿದ್ಯುತ್ ಲೈನ್ ಗೆ ತಗುಲಿದ ಹಿನ್ನೆಲೆ ಘಟನೆ ನಡೆದಿದೆ.
ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ದೊಡ್ಡಪ್ಪ ಸಂತೋಷ್ ಸೇರಿದಂತೆ ಐದು ಜನರಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಾಯವಾಗಿದೆ. ಗಾಯಗೊಂಡವರೆಲ್ಲ ಹೊಸ ಮೋಕಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಣ್ಣಪುಣ್ಣ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.


ಸ್ಥಳದಲ್ಲಿದ್ದ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಗಾಯಗೊಂಡವರನ್ನೆಲ್ಲ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಸ್ಥಳದಲ್ಲಿ ಹಾಜರಿದ್ದು ಆರೋಗ್ಯ ವಿಚಾರಿಸಿದರು. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಮೋಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಗಾಯಾಳುಗಳ ಸ್ಥಿತಿ ವಿಚಾರಿಸಿ, ಸಾಂತ್ವನ ಹೇಳಿದರಲ್ಲದೇ ಗಾಯಗೊಂಡ ಐವರಿಗೆ ತಲಾ ಒಂದು ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದರು.
*****