ದೂರವಾಗುವುದೆಂದರೆ…..!
ದೂರವಾಗುವುದೆಂದರೆ
ಅಜ್ಞಾತ ಬೆಳದಿಂಗಳಲ್ಲಿ
ವರುಷಗಳಿಗೊಮ್ಮೆ
ಅರಳುವ ಹೂಗಳ
ರಾಶಿಯ ಬೆಟ್ಟದ
ನಡುವೆ ಹಸ್ತ ಬೆಸೆದು
ನಡೆವ ಕನಸ ಕಂಡದ್ದು
ನನಸಾಗಲಿಲ್ಲವೆಂಬ
ನೋವಿಗೆ ಭಾನು
ಕಣ್ಣೀರಿಟ್ಟಂತೆ
ದೂರವಾಗಿ
ಮರೆಯಾಗುವುದೆಂದರೆ
ಬಿರು ಬೇಸಿಗೆಯಲಿ
ನೆತ್ತಿಮೇಲೆ ಸುಡುವ
ಸೂರ್ಯನಿಗೊಂದು
ಮೋಡದ ಕೊಡೆಯಿಡಿಯಲಾಗದೆ
ಗ್ರಹಣ ಸೃಷ್ಟಿಸುವ
ಚಂದ್ರನ ಹಠದಂತೆ
ಮರೆತು ಮರೆಯಾಗುವುದೆಂದರೆ
ಶಾಂತ ನದಿಯು
ಅನುರಾಗದ ದನಿಯಾಗದೆ
ವ್ಯಥೆಗೆ ಪಲ್ಲವಿಸುವ
ಮೋಹದಿ ಬೆಸೆದ
ಕೆಂಪಡರಿದ ಕಡಲು
ಹುಣ್ಣಿಮೆಗೆ ಉಕ್ಕೇರಿದಂತೆ
ಮರೆಯಾಗಿ
ಇತಿಹಾಸದ ಪುಟಗಳಲಿ
ಜೀವಿಸುವುದೆಂದರೆ
ಬದುಕ ಬೆರಗಿಗೆ
ಒಡಲೊಳಗಣ ಜ್ವಾಲೆ
ತಣ್ಣಗೆ ವಿರಮಿಸದೆ
ಮುನಿದು ಮಣಿದ
ಕಣ್ಣೀರಿನ ನೋವ ತೆರೆಯಂತೆ
-ಡಾ. ಸಿ. ನಂದಿನಿ, ಬೆಂಗಳೂರು
*****