ಅನುದಿನ ಕವನ-೬೫೮, ಕವಿ:ಎ.ಎನ್.ರಮೇಶ್. ಗುಬ್ಬಿ, ಕವನದ ಶೀರ್ಷಿಕೆ: ಕೈವಶವಾಗಬೇಕು ಕಾಲ.!

“ಗಡಿಯಾರದೊಳಗೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಡುವಷ್ಟರಲ್ಲಿ ದೊಡ್ಡ ಮುಳ್ಳು ಒಂದು ಸುತ್ತು ಬಂದು ಬಿಟ್ಟಿರುತ್ತದೆ. ಆ ಒಂದು ಸುತ್ತಿನಲ್ಲಿ ಏನೆಲ್ಲಾ ಸಂಗತಿಗಳು, ಎಷ್ಟೆಲ್ಲಾ ಸಂತಸಗಳು ಘಟಿಸಿ ಹೋಗುತ್ತವೆ. ಇಲ್ಲ ಸಲ್ಲದ ಯೋಚನೆ ಯಾತನೆಗಳಲಿ ಪರವಶವಾಗದೆ, ಪ್ರತಿ ಕ್ಷಣಗಳನು ಕೈವಶ ಮಾಡಿಕೊಂಡು ಸಂಭ್ರಮಿಸುವುದೇ ಬದುಕಿನ ಬೆಳಕು. ಏನಂತೀರಾ..?”👇
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಕೈವಶವಾಗಬೇಕು ಕಾಲ.!

ಅಂಗೈಯೊಳಗಣ ನೀರಿನಂತೆ ಜಾರಿ
ಬೆರಳುಗಳ ಸಂದುಗಳಿಂದ ಸೋರಿ
ಹರಿದು ಹೋಗಿಯೇ ಬಿಡುವುದು
ಕೊಂಚವು ಪರಿವೆಗೇ ಬರದಂತೆ ಕಾಲ.!

ಒಣಗಿದ ತರಗೆಲೆಗಳಂತೆಯೇ ಹಾರಿ
ಬೀಸುವ ಗಾಳಿಯೊಡನೆ ಮೆಲ್ಲ ತೂರಿ
ಸರಿದು ಹೋಗಿಯೇ ಬಿಡುವುದು
ಸ್ವಲ್ಪವೂ ಅರಿವಿಗೂ ಬರದಂತೆ ಕಾಲ.!

ಸರಿವ ಸಮಯದ ಮಹಾಮೋಡಿಯಿದು
ಓಡುವ ಕಾಲದ ಮಾಯಾಗಾರುಡಿಯಿದು
ನೋಡ ನೋಡುತ್ತಿದ್ದಂತೆ ವೇಳೆಯಿದು
ಗೊತ್ತೇ ಆಗದಂತೆ ಕಳೆದೇ ಹೋಗುವುದು.!

ನಾಳಿನ ಕನಸುಗಳ ಮರೀಚಿಕೆಯೆ ಮಧ್ಯೆ
ನಿನ್ನೆಯ ನೆನಪುಗಳ ಕನಲಿಕೆಯ ನಡುವೆ
ಇಂದುಗಳೆಂಬ ಈ ಕ್ಷಣಗಳೆಂಬ ಸಮಯ
ಆಗಿಯೇ ಹೋಗುವುದು ಮಂಗಮಾಯ.!

ಭವಿಷ್ಯದಾ ಭ್ರಮೆಗಳ ಬೆನ್ನತ್ತಿ ಸಾಗುವುದರಲ್ಲಿ
ಭೂತದಾ ಘಟನೆಗಳ ನೆನೆದು ಕೊರಗುವುದರಲ್ಲಿ
ವರ್ತಮಾನವೆಂಬ ಅತ್ಯಮೂಲ್ಯ ಸಮಯ
ಥಟ್ಟನೆ ಕರಗಿಯೇ ಹೋಗುವುದು ಗೆಳೆಯ.!

ಮಿಂಚಿ ಹೋದ ಮೇಲೆ ಕಣ್ಣೆದುರಿನ ಕಾಲ
ಬೆಚ್ಚಿ ಎಚ್ಚೆತ್ತು ಮರುಗಿ ಕೊರಗಿದರೇನು ಫಲ?
ಮಳೆಯಿದ್ದಾಗಲೇ ಮೈ ತೊಳೆದುಕೊಳ್ಳಬೇಕು
ಬಿಸಿಲು ಬಿದ್ದಾಗಲೇ ಬಟ್ಟೆ ಒಣಗಿಸಿಕೊಳ್ಳಬೇಕು.!

ನಿನ್ನೆ ನಾಳೆಗಳ ಜಪನೆ ತಪನೆಯಲ್ಲಿಲ್ಲ ಬದುಕು
ಇಂದಿನ ಈಕ್ಷಣದ ಆಸ್ವಾಧನೆಯಲ್ಲಿದೆ ಬದುಕು.!
ಕಾಲಜಾಲದಿ ಬಾಳಿಗೆ ನಮ್ಮದೇ ಉತ್ತರದಾಯಿತ್ವ.!
ಪ್ರತಿಕ್ಷಣದ ಸ್ವೀಕಾರ ಸಾಕ್ಷಾತ್ಕಾರವೇ ಬೆಳಕಿನ ತತ್ವ.!

-ಎ.ಎನ್.ರಮೇಶ್. ಗುಬ್ಬಿ.
*****