👉ಚಿಂತೆಗೆ ಕೊನೆಯಿದೆ👈
ಕಣ್ಣು ತೆರೆದಾಗ
ಕಾಣುವಂತಾದ್ದೆಲ್ಲ
ಬಿಟ್ಟು
ಹೋಗುವಂತಾದ್ದು;
ಯಾಕೆಂದರೆ: ಭೂಮಿಯ ಗುಣವೇ ಅಂಥಾದ್ದು.
ಆಕಾಶ ಹೆರುವ ಬಿಂದು ಸಿಂಧುವಿನೊಳಗೆ
ಒಂದೇ ದ್ರವ್ಯದ ಸಾರ; ಆದರೂ
ಸಿಂಧುವಿನ ಮೇಲೆ ತೇಲುವ ಅಲೆಗಳಂತೆ
ಬಿಂದುವಿನ ಮೇಲೆ ಜೀವಗಳ ಸ್ವಗತ.
ಕಾಮ ಚೇಷ್ಟೆಯಲಿ ಕಾಡು ಕಡಲಿನ ನೆಂಟರ
ಸಂತೃಪ್ತ ಯಾನ
ಗೊಂದಲಗಳಿದ್ದರೆ ಮನುಷ್ಯ ಲೋಕದಲ್ಲಿ ಮಾತ್ರ.
ಕಣ್ಣು ತೆರೆವ ಮುನ್ನ
ಹುಟ್ಟದ ಭಾವ ಪದಗಳ ಹಿಂದೆ
ಇರುವ ಪ್ರೀತಿಗೆ ಒಲಿದು ಅದರೊಂದಿಗೆ
ಕಣ್ ಬಿಚ್ಚಿದರೆ ದ್ವಂದ್ವಾತೀತ ಬದುಕಿನ ಅನಾವರಣ!
ಅಲ್ಲಿ
ಬಾಯ್ತೆರೆದ ಚಿಪ್ಪಿನೊಳಗಿನ ಮುತ್ತಿಗೆ
ಕೈ ಸೋಕಿದರೆ
ಮನವು ಹಿಗ್ಗಿ ಮುಕ್ತಿ ಪದ ಕುಗ್ಗಿ
ತೆರೆಯುವುದು ದರ್ಶನದ ಬಾಗಿಲು;
ಈ ಅವಸ್ಥೆಯ ಬಯಲಲ್ಲಿ
ಸುಮ್ಮನಿದ್ದರೂ ಏನಾಗುವುದಿದೆಯೊ ಅದೇ
ಆಗಿ ಬದುಕುತ್ತದೆ!
-ಎಂ.ಲಕ್ಷ್ಮೀನಾರಾಯಣ, ಅಮೃತಹಳ್ಳಿ
*****