ಸಂಗಂ ವಿಶ್ವಕವಿ ಸಮ್ಮೇಳನಕ್ಕೆ ಸಂಭ್ರಮದ ತೆರೆ: ‘ಮೂರು ದಿನಗಳ ಕಾವ್ಯಧಾರೆ ಬಳ್ಳಾರಿಯಲ್ಲಿ ಈವರೆಗೆ ಮಾಡಿದ ಪಾಪ ತೊಳೆದಿದೆ’ -ಹಿರಿಯ ಕವಿ, ಸಂಸದ ಡಾ.ಎಲ್ ಹನುಮಂತಯ್ಯ

(ಸಿ.ಮಂಜುನಾಥ)
ಬಳ್ಳಾರಿ, ಅ.23:ನಗರದಲ್ಲಿ ಮೂರು ದಿನಗಳ ಕಾಲ ಜರುಗಿದ ಸಂಗಂ ವಿಶ್ವಕವಿ ಸಮ್ಮೇಳನ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು.
ರಾಜ್ಯ, ದೇಶ-ವಿದೇಶಗಳಿಂದ ಆಗಮಿಸಿದ್ದ ಕವಿ-ಕವಯತ್ರಿಯರು, ಕಾವ್ಯಪ್ರಿಯರು ಭಾರವಾದ ಮನಸುಗಳಿಂದ ಬಿಐಟಿಎಂ ಕಾಲೇಜು ಆವರಣದಿಂದ ತಮ್ಮ ಊರುಗಳತ್ತ ಹೆಜ್ಜೆ ಹಾಕಿದರು.
ಸಮಾರೋಪ ಭಾಷಣ ಮಾಡಿದ ಸಂಸದ, ಹಿರಿಯ ಕವಿ ಡಾ. ಎಲ್ ಹನುಮಂತಯ್ಯ ಅವರು ಮೂರು ದಿನಗಳ ಕಾವ್ಯಧಾರೆ ಬಳ್ಳಾರಿಯಲ್ಲಿ ಈವರೆಗೆ ಮಾಡಿದ ಪಾಪ ತೊಳೆದುಕೊಂಡಿದೆ ಎಂದು ಅಕ್ರಮ ಗಣಿಗಾರಿಕೆಯನ್ನು ಹೆಸರಿಸದೇ ವ್ಯಂಗವಾಡಿದರು.
ಲಯ, ಸೌಹಾರ್ದ, ವಯ್ಯಾರ ಪದ ಬಳಕೆಯಿಂದ ಸಾಹಿತಿ ಆಗಲಾರ, ಮನುಷ್ಯತ್ವದ ಹುಡುಕಾಟದಲ್ಲಿ ಕವಿ ಕಾವ್ಯ ರಚನೆಯಲ್ಲಿ ತೊಡಗಿಸಿ ಕೊಂಡಿರುತ್ತಾನೆ ಎಂದರು.
ಕವಿಗಳು ಪ್ರಸ್ತುತ ಒತ್ತಡದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಹೊರಹಾಕುವ ಸನ್ನಿವೇಶದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸಿದ್ಧ ತೆಲುಗು ಕವಿ ಶ್ರೀ ಶ್ರೀ ಅವರ ಜನಪ್ರಿಯ ಕವನ ‘ದೇಶ ಅಂದರೆ ಬರೀ ಮಣ್ಣಲ್ಲ ಮನುಷ್ಯ’ ಎಂದು ಪ್ರಸ್ತಾಪಿಸಿದ ಡಾ. ಹನುಮಂತಯ್ಯ ಅವರು ಈ‌ ನಿಟ್ಟಿನಲ್ಳಿ ಆಳುವ ಪ್ರಭುತ್ವಗಳು ಜನಪರವಾದ ಆಡಳಿತ ‌ನೀಡಬೇಕು ಎಂದು ಒತ್ತಾಯಿಸಿದರು.


ದೇಶ-ಭಾಷೆಗಳನ್ನು ಮೀರಿ ಕವಿಗಳು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಕಾವ್ಯಗಳನ್ನು ರಚಿಸುವ ಮೂಲಕ ಜನ ಜಾಗೃತಿಯನ್ನುಂಟು ಮಾಡುವಂತೆ ಸಲಹೆ ನೀಡಿದರು.
ಬಳ್ಳಾರಿಯಂತಹ ಜಿಲ್ಲಾ ಕೇಂದ್ರದಲ್ಲಿ ಯಶಸ್ವಿಯಾಗಿ ವಿಶ್ವಕವಿ ಸಮ್ಮೇಳನ ನಡೆದು ನಗರದಲ್ಲಿ ಕಾವ್ಯಧಾರೆ ಹರಿಸಿದ ಅರಿವು ಸಂಘಟನೆ, ಪದಾಧಿಕಾರಿಗಳು ವಿಶೇಷವಾಗಿ ಹಿರಿಯ ಕವಿ-ನಾಟಕಕಾರ ಡಾ.‌ಎಚ್ ಎಸ್ ಶಿವಪ್ರಕಾಶ್, ಕವಿ ಅರೀಫ್ ರಾಜಾ ಅವರ ಶ್ರಮವನ್ನು ಕೊಂಡಾಡಿದರು.
ಕವಿಗಳು ನೇರವಾಗಿ ಅಥವಾ ಪರೋಕ್ಷವಾಗಿಯಾದರೂ ಸರಿ ಸತ್ಯವನ್ನೇ ಪ್ರತಿಪಾದಿಸ ಬೇಕು ಎಂದು ಹೇಳಿದರು.
ಸಮ್ಮೇಳನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟೀಕೆಗಳ ಬಗ್ಗೆ ಪ್ರಸ್ರಾಪಿಸಿ ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಜತೆ ನಾವಿದ್ದೇವೆ ಎಂದರು.
ಡಾ.ಶಿವಪ್ರಕಾಶ್ ಮಹತ್ವದ ಕವಿ ವಿದೇಶದಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಹ ಸಂಘಟಕ ಡಾ. ಯೋಗಾನಂದ ರೆಡ್ಡಿ ಮಾತನಾಡಿ ಮೂರು ದಿನ ಮೂರು ನಿಮಿಷದಂತೆ ಮುಗಿದಿದೆ ಎಂದು ಭಾಸವಾಗುತ್ತಿದೆ. ಇದು ವಿಶ್ವ ಕವಿತ್ವದ ಸಮ್ಮೇಳನ, ಎಲ್ಲಿ ಬರೆದರೂ ಅದು ವಿಶ್ವ ಕಾವ್ಯ ಆಗಬೇಕು. ಕವಿಗಳು ತಮ್ಮ ಊರು, ದೇಶಗಳ ಪ್ರತಿನಿಧಿಯಾಗಿ ಬಂದಿದ್ದಾರೆ. ಸಮಾರೋಪ ಆರಂಭದ ಮುನ್ನುಡಿ ಎಂದು‌ ಸಮ್ಮೇಳನ ಯಶಸ್ವಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಇಟಲಿಯ ಕವಯತ್ರಿ ಲಿಂಗೋನಿ, ಅನುವಾದಕ ಡಾ.ಕಮಲಾಕರ ಭಟ್, ಪದ್ಮಶ್ರೀ ಮಂಜಮ್ಮ‌ಜೋಗತಿ, ಡಾ. ಎಸ್ ಜೆ ವಿ ಮಹಿಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣವರ್ ಮತ್ತಿತರರು ಮಾತನಾಡಿದರು.
ಲೋಹಿಯಾ ಪ್ರಕಾಶನ ಅಧ್ಯಕ್ಷ ಸಿ. ಚೆನ್ನಬಸವಣ್ಣ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ಡಾ. ಎಲ್. ಹನುಮಂತಯ್ಯ, ಪದ್ಮಶ್ರೀ ಮಂಜಮ್ಮ ಜೋಗತಿ, , ಡಾ. ಎಚ್ ಎಸ್ ಶಿವ ಪ್ರಕಾಶ್ ಮತ್ತಿತರನ್ನು ಸಂಘಟಕರು ಸನ್ಮಾನಿಸಿ ಗೌರವಿಸಿದರು.
ಡಾ.ಮಧುಸೂದನ ಕಾರಿಗನೂರು ಅವರು ಡಾ.‌ಎಲ್ ಹನುಮಂತಯ್ಯ ಅವರನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಡಾ. ಅರವಿಂದ ಪಟೇಲ, ಸಿರಿಗೆರೆ ಪನ್ನಾರಾಜ್, ಡಾ. ಕೆ. ಶಿವಲಿಂಗಪ್ಪ ಹಂದ್ಯಾಳ್, ಕವಿಗಳಾದ ವೀರೇಂದ್ರ ರಾವಿಹಾಳ್, ಅಜಯ್ ಬಣಕಾರ್, ಅರಿಫರಾಜ್, ಡಾ. ಗಡ್ಡಿ ದಿವಾಕರ ಮತ್ತಿತರರು ಉಪಸ್ಥಿತರಿದ್ದರು.
ಡಾ. ಉಮಾಮಹೇಶ್ವರಿ ಗಡ್ಡಿ ಕಾರ್ಯಕ್ರಮ ನಿರೂಪಿಸಿದರು.
******