ಅನುದಿನ ಕವನ-೬೬೧, ಕವಿ: ಜಬೀವುಲ್ಲಾ ಎಮ್. ಅಸದ್ ಮೊಳಕಾಲ್ಮುರು, ಕವನದ ಶೀರ್ಷಿಕೆ: ಹುಡುಕುವುದೆಂದರೆ….

ಹುಡುಕುವುದೆಂದರೆ…

ಹುಡುಕುವುದೆಂದರೆ…
ತಡಕಾಡುವುದಲ್ಲ
ಅಂತರಂಗ ಶೋಧಿಸಿ
ಕಂಡುಕೊಳ್ಳುವುದು
ಕತ್ತಲಲ್ಲಿ ಕರಚಾಚಿ
ಅಲೆದಂತಲ್ಲ
ಬೆಳಕ ಹೊಂಗಿರಣಕೆ
ಹಕ್ಕಿಯಾಗುವುದು
ಕನಸ ಕಿರುಬೆರಳ ಪಿಡಿದು
ನಡೆದಂತಲ್ಲ
ಕಾಣದ ಸತ್ಯಕ್ಕೆ
ಎದುರಾಗುವುದು
ಕಣ್ಣು ಮುಚ್ಚಿ ಲೋಕವ
ಕಾಣುವುದಲ್ಲ
ಅರಿವು ಬಿಡಿಸಿ
ಮನಗಾಣುವುದು

ಇದೆ ಎಂದರೆ, ಇದೆ
ಇಲ್ಲದ್ದನ್ನು ಹುಡುಕ ಹೊರಡುವುದಲ್ಲ
ನೀ ಹೊರಟೆ ಎಲ್ಲಿಗೆ?
ಸಮಷ್ಟಿಯೇ ನಿನ್ನಲ್ಲಿ
ಅಡಗಿರುವಾಗ
ಹೊರಗೆ ನಿನಗೇನು ಸಿಕ್ಕಿತು?
ನಿನ್ನೊಳಗೆ ಅಹಂ
ತುಂಬಿರುವಾಗ

ನಾನು ಎಂಬುವುದನು
ಕಳೆ ಮೊದಲು
ನಿನಲ್ಲದ ನೀನು, ನಿನಗೆ ಸಿಗುವೆ
ನಿನ್ನ ಬದಲು

ಕಂಡದ್ದೆಲ್ಲವೂ ನಿಜವಲ್ಲ
ಕಾಣದ್ದೆಲ್ಲವೂ ಸುಳ್ಳಲ್ಲ
ಕಂಡು ಕಾಣದರೊಡಗೂಡಿ
ಹಗಲು ಇರುಳಾಗಿ
ಇರುಳು ಕುರುಡಾಗಿ
ಇರುವುದೆಲ್ಲವೂ ಇಲ್ಲವಾಗಿ
ಎಲ್ಲವೂ ಹೊತ್ತು ಉರಿದು
ಬೂದಿಯಾಗುವುದು
ಬಿಸಿಲಿಗೆ ನೀರು
ಆವಿಯಾಗುವುದು
ನಸುಕಿಗೆ ಅರಳಿದ ಹೂ
ಸಂಜೆಗೆ ಬಾಡುವುದು
ಇರುವುದು ಇಷ್ಟೇ ಬದುಕು!

ಹುಡುಕುವುದೆಂದರೆ…
ನಿನ್ನ ನೀ ಕಳೆದುಕೊಳ್ಳುವುದು!

◼️-ಜಬೀವುಲ್ಲಾ ಎಮ್. ಅಸದ್
ಮೊಳಕಾಲ್ಮುರು