ಅನುದಿನ ಕವನ-೬೬೫, ಕವಿ:ಶಶಿ ಸಂಪಳ್ಳಿ, ಸಾಗರ, ಕವನದ ಶೀರ್ಷಿಕೆ: ಮನುಷ್ಯನೊಬ್ಬನ ಸ್ವಗತ

ಮನುಷ್ಯನೊಬ್ಬನ ಸ್ವಗತ
ನಾನೊಂದು                                        ಮುತ್ತುಗವಾಗಿದ್ದೆ; ನೆಲದ ನಂಟು   ಗಟ್ಟಿಯಾಗಿಟ್ಟುಕೊಂಡೂ                                     ನಭಕೆ ನಿಲುಕಿದ್ದೆ.

ನಾನೊಂದು
ಹೂ ಚಿಗುರಾಗಿದ್ದೆ; ಬಾಡಿ
ಉದುರುವ ಅರಿವಿದ್ದರೂ
ನಳನಳಿಸಿದ್ದೆ.

ನಾನೊಂದು
ತೊರೆಯಾಗಿದ್ದೆ; ಕಟ್ಟಿಹಾಕುವ
ಒಡ್ಡುಗಳ ಭಯ ಮೀರಿ
ಸ್ವಚ್ಛಂದ ಹರಿದಿದ್ದೆ.

ನಾನೊಂದು
ಅಂಗುಲ ಹುಳುವಾಗಿದ್ದೆ; ಅರೆ
ಚಣದ ಬದುಕು ಗೊತ್ತಿದ್ದೂ
ಅದಮ್ಯ ಉತ್ಸಾಹದಲ್ಲಿ ಸರಿದಿದ್ದೆ.

ನಾನೊಬ್ಬ
ಮನುಷ್ಯನಾದೆ….
ಈಗ; ಬಯಕೆ, ಭಯ, ಸೇಡು, ಸೆಡವು,
ಸೋಲು, ಹತಾಶೆಗಳ
ಬೇಗೆಯಲಿ ಬೇಯುತಿರುವೆ.

ಉಣ್ಣುವ ಅನ್ನ, ತೊಡುವ ಬಣ್ಣ,
ಧರ್ಮ ದೇವರು,
ದೇಶ, ಕಾಲಗಳ
ಗಡಿ-ಗೆರೆಗಳ ಬಲೆಯಲಿ ನಾನೇ
ಬೇಟೆಯಾಗಿರುವೆ.


– ಶಶಿ ಸಂಪಳ್ಳಿ, ಸಾಗರ