ಅನುದಿನ ಕವನ-೬೬೬, ಕವಯತ್ರಿ:ರೇಣುಕಾ ರಮಾನಂದ, ಉತ್ತರ ಕನ್ನಡ ಕವನದ ಶೀರ್ಷಿಕೆ:ಅವ್ವ ಮತ್ತು ಬೆಕ್ಕು

ಅವ್ವ ಮತ್ತು ಬೆಕ್ಕು

ಅವ್ವ ಮೆಹನತ್ ಮಾಡಿದ                            ಗದ್ದೆಯಲ್ಲೀಗ ಗೆದ್ದಲುಗಳ                              ಗದ್ದುಗೆಗಳು

ಅವಳು ಸಾಕಿದ ಬೆಕ್ಕು
ಹುಡುಕಿಕೊಂಡಿದೆ
ಹೊಟ್ಟೆಪಾಡಿಗಾಗಿ
ತೀರ ಹತ್ತಿರದ ಮನೆ
ಎಂದಾದರೊಂದು ದಿನ
ಅವ್ವ ಬಂದಾಳೆಂಬ
ವಾಂಛೆ ಅದಕ್ಕೆ

ಯಾವ ದಿಕ್ಕಿಗೆ ಕುಳಿತರೂ
ಅದರ ಮುಖ
ಮನೆಯ ದಿಕ್ಕಿಗೇ..
ಅಪರೂಪಕ್ಕೊಮ್ಮೆ ಕಳ್ಳಬೆಕ್ಕಿನಂತೆ
ಬಂದುಹೋಗುವ ನನ್ನ
ಗುರಿಯಿಟ್ಟು
ಬೇಟೆಯಾಡಲೆಂಬಂತೆ

ಅವ್ವನ ಬದಲು ಸುಳಿದಾಗಲೆಲ್ಲ ನಾನು
ಸುತ್ತುತ್ತದೆ ಕಾಲು
ಕರುಳಿಗೇ ಗುರಿಯಿಟ್ಟಂತೆ
ಕೊನೆಗೊಮ್ಮೆ ಮೀಸೆ ಅದುರಿಸಿ
ಹಲ್ಲು ಕಡಿದು ಗುರುಗುಟ್ಟುತ್ತದೆ
ತೆಗೆ ಬೀಗ,ಗುಡಿಸು ಒರೆಸು
ಒಂದೂ ಬಿಡದೆ ಕೀಳು ಅಂಗಳದ ಹುಲ್ಲು
ಮೊದಲಿನಂತೆ

ಮರಳುವ ಸುಳಿವಾದರೆ ಸಾಕು
ಪರಚುತ್ತದೆ ನೆಲ
ಬೆನ್ನಟ್ಟುತ್ತದೆ ಬಹುದೂರ
ಅಂತರ ಹೆಚ್ಚಾದಂತೆ ಹೊರಳುತ್ತದೆ
ಆವೇಶದ ಸಿಟ್ಟು ಬಾಕಿಯಿಟ್ಟು

ಸರಿರಾತ್ರಿ ಪ್ರಾಣಭಯದಂತೆ
ಕಾಡುತ್ತಿದೆ ಈಗೀಗ ಬೆಕ್ಕು
ಸತ್ತಂತೆ ಕನಸು
ಛಿಲ್ಲನೆ ಬೆವೆತು ಎದ್ದು ಕುಳಿತವಳಿಗೆ
ಸತ್ತದ್ದು ಅವ್ವನೋ.. ಬೆಕ್ಕೋ..
ಮಸುಕು ಮಸುಕು

ಅವ್ವ ಮಲಗಿದ್ದಾಳೆ ಇಲ್ಲಿ ನನ್ನಲ್ಲಿ
ಇಹಪರಗಳೊಂದಾದ ಪರಿಯಲ್ಲಿ
ಬೆಕ್ಕನ್ನೂ ಮನೆಯನ್ನೂ
ಮರೆತು

-ರೇಣುಕಾ ರಮಾನಂದ, ಉತ್ತರ ಕನ್ನಡ
*****