ಅನುದಿನ ಕವನ-೬೬೭, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಅಪ್ಪುವಿಗೆ ಅಕ್ಷರ ನಮನ

ಕರ್ನಾಟಕ ರತ್ನ, ಡಾ. ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ (ಅ. 29) ಒಂದು ವರ್ಷ. ಜನಮಾನಸದಲ್ಲಿ ಅಚ್ಚ‌ಹಸಿರಾಗಿರುವ ಡಾ. ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ತಮ್ಮ ಹನಿಗವನಗಳ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ ಕವಯತ್ರಿ ಶೋಭ ಮಲ್ಕಿಒಡೆಯರ್ ಅವರು!

*ಸುಕೃತ*
ಅಭಿಮಾನಿ ದೇವರುಗಳೆಂದೇ
ಸಂಬೋಧಿಸುತ್ತಿದ್ದ ಅಣ್ಣಾವ್ರ
ಮಗನಾದೆ ಪುನೀತ ;
ನೀನು ಕೋಟ್ಯಾಭಿಮಾನಿಗಳಿಗೆ
ದೇವರಾಗಿ ಜನರ ಹೃದಯದಲ್ಲಿ
ನೆಲೆಸಿದ್ದು ಕರ್ನಾಟಕದ ಸುಕೃತ

*ಅಪ್ಪು*
ಇಷ್ಟು ಬೇಗ “ಪರಮಾತ್ಮ” ನಲ್ಲಿ
ಲೀನವಾದೆ ಅಪ್ಪ – ಅಮ್ಮನ
ಪ್ರೀತಿಯ ಪುತ್ರ ಅಪ್ಪು;
” ಜೇಮ್ಸ್ ಬಾಂಡ್ ” ನ
ನೋಡುವ ಆಸೆ ಅದಮ್ಯವಾಗಿರುವಾಲೇ
ಸಾವು ಬಂದೆರಗಿದ್ದು
ಖಂಡಿತಾ ತಪ್ಪು

*ಸ್ಥಾನ*
ನೀನು ಮಾಡಿದ
ಸಮಾಜ ಸೇವೆಗೆ ಪಡೆದೆ
ಎಲ್ಲರ ಹೃದಯದೊಳು ಸ್ಥಾನ ;
ಕೊಡುಗೈ ದಾನಿಯಾದ
” ನಮ್ಮ ಬಸವ ” ನಿಗೆ
ಯಾಕೀ ಅವಸರದ ಮರಣ.

*ಆಕಾಶ*
ತಂದೆಗೆ ತಕ್ಕ ಮಗನಾಗಿ
” ಅಭಿ “ಮಾನಿಗಳ ಹೃದಯದಲ್ಲಿ
ಪ್ರೀತಿ ಪಡೆದೆ
” ಆಕಾಶ “ದೆತ್ತರ ;
ಎಲ್ಲರ ಮನೆ ಮನದಲ್ಲೂ
ಶಾಶ್ವತವಾಗಿ ನೆಲೆಸಿ
ಅಜರಾಮರನಾದ
” ರಾಜಕುಮಾರ “.


-ಶೋಭಾ ಮಲ್ಕಿ ಒಡೆಯರ್ ✍🏻
ಹೂವಿನ ಹಡಗಲಿ
*****