ಕಾಲ ಬದಲಾಗಿಲ್ಲ…..!
ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ!
ರವಿ ಮೂಡಣದಲ್ಲಿ
ಉದಯಿಸುತ್ತಾನೆ
ಪಡುವಣದಲ್ಲಿ
ವಿಶ್ರಮಿಸುತ್ತಾನೆ
ಚಂದ್ರ ಬೆಳಗುತ್ತಾನೆ
ನಕ್ಷತ್ರಗಳು ಮಿನುಗುತ್ತಲೇ ಇವೆ
ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ||
ಹುಲಿ ಸಿಂಹಗಳು
ಘರ್ಜಿಸುವುದ ಮರೆತಿಲ್ಲ
ನಾಯಿ ನರಿಗಳು
ಊಳಿಡುತ್ತಲಿವೆ
ಕೋಗಿಲೆಯ ನಿನಾದ ಹಕ್ಕಿಗಳ ಚಿಲಿಪಿಲಿ
ಕಾಗೆಯ ಕರ್ಕಶ ಹದ್ದುಗಳ ಆವೇಶ
ಇಂದಿಗೂ ಎಂದಿನಂತೆಯೇ ಇದೆ
ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ||
ಇಲಿ ಹೆಗ್ಗಣಗಳು
ಬಿಲ ತೋಡುವುದನು ಬಿಟ್ಟಿಲ್ಲ
ಹುಲಿ ಹುಲ್ಲು ತಿನ್ನುವುದಿಲ್ಲ
ಸಸ್ತನಿಗಳು ಮೊಟ್ಟೆ ಇಡುತ್ತಿಲ್ಲ
ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ||
ನಾವು ಮನುಜರು
ಬದಲಾಗಿದ್ದೇವೆ
ಪ್ರಕೃತಿಯ ವಿಕೃತಿಗೊಳಿಸಿ
ಸಾಕಾರ ಮರೆತು
ದೇವ ಮುನಿಸಿಗೆ ತುತ್ತಾಗಿದ್ದೇವೆ
ಕಾಡು ಮೇಡು ಕಡಿದು
ಬೆಟ್ಟ ಗುಡ್ಡಗಳ ಬಗೆದು
ಸೇವೆಯನು ಮರೆತು ಸುಲಿಗೆಯನು
ಸಲೀಸು ಮಾಡಿಕೊಂಡು
ಜೀವನ ಶಾಶ್ವತ ಎಂದುಕೊಂಡು
ಕೋಟಿಗಟ್ಟಲೆ ಲೂಟಿ ಹೊಡೆಯುತ್ತಿದ್ದೇವೆ
ದೇವನ ಕರುಣೆಯ ಗಾಳಿ ನೀರು ಬೆಳಕನ್ನು
ಮಾರಾಟಕ್ಕಿಟ್ಟಿದ್ದೇವೆ. ಕಲುಷಿತಗೊಳಿಸಿದ್ದೇವೆ.
ಆತ್ಮಾವಲೋಕನ ಮರೆತು
ಸ್ವಾರ್ಥಿಗಳಾಗುತ್ತಿದ್ದೇವೆ
ಕಾಲ ಬದಲಾಗಿಲ್ಲ ಎಂದಿನಂತೆಯೇ ಇದೆ ||
ನಾವು ಮನುಜರು ಬದಲಾಗಿದ್ದೇವೆ
-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****