🌺🙏ಸಮಸ್ತ ಸಹೃದಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು🙏🏻💐
ಕನ್ನಡದ ಕಂದ
ಕಂದನಾ ತೊದಲು ನುಡಿ , ಕನ್ನಡಕ್ಕೇ ಮುನ್ನುಡಿ
ಮಾತೃಭಾಷೆ ಮರೆಯದಿರಿ ನಮಗಿದೋ ಜೀವನಾಡಿ.
ಮಾತೆಯ ಮಡಿಲ ಮಮತೆಯಲ್ಲಿ
ಮುಸುಮುಸು ಕಿರು ನಗುವಿನಲ್ಲಿ
ಮೃಧುವಾಗಿ ಅರಳಿತು ಕನ್ನಡ
ಕಂದನಾ ತೊದಲು ನುಡಿಯಲ್ಲಿ.
ಮಂದಾರ ಮಲ್ಲಿಗೆ ತೋಟದಲ್ಲಿ
ಸುಮಗಳ ಮಕರಂದ ಪಾತ್ರೆಯಲ್ಲಿ
ಪಕ್ವವಾಗಿ ಫಲಿಯಿತು ಕನ್ನಡ
ಚಿಟ್ಟೆಗಳ ಚೆಲ್ಲಾಟದ ಪರಿಧಿಯಲ್ಲಿ.
ಚಂದನದ ಚೆಲುವ ನಾಡಲ್ಲಿ
ಕೊರೆದು ತೇಯ್ದ ಜರಡಿಯಲ್ಲಿ
ಘಮವಾಗಿ ಪಸರಿಸಿತು ಕನ್ನಡ
ಕರುಣಾಳು ಮನೆ ಮನಗಳಲ್ಲಿ.
ಹರಿವ ನದಿ ತೊರೆಗಳಲ್ಲಿ
ಧುಮ್ಮಿಕ್ಕುವ ಝರಿ ಜಲಪಾತಗಳಲ್ಲಿ
ಹೊಮ್ಮಿ ಬಂದಿತು ಕನ್ನಡ
ಮಂಜುಳ ಗಾನ ಲಹರಿಯಲ್ಲಿ.
ಗಿರಿ ಗುಹೆಗಳ ತಾಣದಲ್ಲಿ
ಸಿಂಹ ಗರ್ಜನೆಯ ಅಬ್ಬರದಲ್ಲಿ
ಝೇಂಕರಿಸಿ ಪ್ರತಿಧ್ವನಿಸಿತು ಕನ್ನಡ
ಕನ್ನಡಿಗರ ಕಂಚಿನ ಕಂಠದಲ್ಲಿ.
ಹುಟ್ಟು ಸಾವಿನ ಬಾಳ ಬಂಡಿಯಲ್ಲಿ
ಮೂರು ದಿನಗಳ ಈ ಸಂತೆಯಲ್ಲಿ
ಉಸಿರಾಗಿ ಹಸಿರಾಯಿತು ಕನ್ನಡ
ವೀರರ ಗಂಡೆದೆಯ ಗುಂಡಿಗೆಯಲ್ಲಿ.
ಭಾರತ ಮಾತೆಯ ಉದರದಲ್ಲಿ
ಭುವನೇಶ್ವರಿ ತಾಯಿ ಜನ್ಮತಳೆದಳಿಲ್ಲಿ
ನಾಡು ನುಡಿಯ ಆರಾಧ್ಯ ದೈವವಾಗಿ
ನೆಲೆಸಿದಳು ನಮ್ಮೆಲ್ಲರ ಹೃದಯಮಂದಿರದಲ್ಲಿ
✍️ ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ರಾಯಚೂರು ಜಿಲ್ಲೆ.