ಅನುದಿನ ಕವನ-೬೭೦, ಕವಯತ್ರಿ: ಹಟ್ಟಿ ಸಾವಿತ್ರಿ ಪ್ರಭಾಕರಗೌಡ, ಗದಗ, ಕವನದ ಶೀರ್ಷಿಕೆ:ಹರಿವ ನೀರ ಅಲೆಗಳೆಲ್ಲ…..

ನನಗೆ ಕನ್ನಡ ಶಿಕ್ಷಕಿಯ ಸ್ಥಾನವನ್ನು ಕರುಣಿಸಿ ನನ್ನ ಲೌಕಿಕ ಅಗತ್ಯಗಳಾದ ಅನ್ನ ವಸ್ತ್ರ ಮತ್ತು ನನ್ನ ಆತ್ಮದ ಪಯಣದ ಹೊಳಪಿಗೆ ಅಕ್ಷರರೂಪಿಯಾಗಿ ಜೊತೆಗಿರುವ ತಾಯಿ ಭುವನೇಶ್ವರಿಗೆ ನನ್ನ ಅಂತರಾಳದ ಕಾವ್ಯಾಕ್ಷತೆ ಸಮರ್ಪಿತ.

🌺👉ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು👈💐
-ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಹರಿವ ನೀರ ಅಲೆಗಳೆಲ್ಲ…..

ಹಸಿರು ಎದೆಯ ಮ್ಯಾಲೆ ನಿನ್ನ
ಹೆಸರ ಬರೆಯಲಿಲ್ಲ ನೀನು
ಉಸಿರ ಕೊಟ್ಟು ಪೊರೆವ ತಾಯಿ ನಿತ್ಯ ನಮಿಸುವೆ!
ಪಸರಿಸಿಹುದು ಮಡಿಲ ತುಂಬ
ಹಸಿರು ಗರಿಕೆ ಹೂವು ಬಳ್ಳಿ
ವಸನ ನಿನಗೆ ಸಸ್ಯವೆಲ್ಲ ಸತ್ಯ ಎನಿಸುವಿ!

ಹರಿವ ನೀರ ಅಲೆಗಳೆಲ್ಲ
ಹರಿಯ ನಾಮ ಉಸಿರುತಿರಲು
ಕರಿಯ ಮಣ್ಣ ಪೀಠ ಮಾಡಿ ಇಲ್ಲಿ ನೆಲೆಸಿದಿ!
ಅರಿವಿನಾಳ ಅರಿಯುವಂಥ
ಕರುಣೆಯೊಂದು ಸುರಿಯಬೇಕು
ಬರೆವ ಕಾವ್ಯದಲ್ಲಿ ನೀನು ಬಂದು ನೆಲೆಸಿದಿ!

ಗಿಡದ ಮರದ ರೆಂಬೆ ಕೊಂಬೆ
ಬುಡದಿ ನಿಂತ ನೀರಿನೊಳಗೆ
ಬಿಡದೆ ಜೀವ ಸೆಲೆಯೆ ಆಗಿ ನಿತ್ಯ ನಲಿಯುವಿ!
ಒಡನೆ ಮಡಿಲ ತಂಪಿನಲ್ಲಿ
ಗೂಡಿನೊಳಗೆ ಹೊರಗೆ ಇಲ್ಲಿ
ಹಾಡುತಿರುವ ಹಕ್ಕಿ ಕಂಠ ಕನ್ನಡೆನಿಸುವಿ!

ಬಿರಿವ ಹೂವ ಪಕಳೆಯಲ್ಲಿ
ಸುರಿವ ದೈವ ಗಂಧವಾಗಿ
ಹರಿವ ಮಂಜ ಹನಿಗಳಾಗಿ ಸೊಬಗೆ ಆಗುವಿ!
ಮೆರೆವ ರವಿಯ ಕಿರಣವೆಲ್ಲ
ಕೊರಳ ತಬ್ಬಿ ಕುಣಿಯುತಿರಲು
ಮರುಳ ಮನದ ತಮವ ಕಳೆವ ದೀಪವಾಗುವಿ!

ಕಂದನೆದೆಯ ತೊದಲಿನಲ್ಲಿ
ಅಂದವೆಲ್ಲ ಸುರಿಯುತಿರಲು
ಚೆಂದವಾಗಿ ಮೊದಲ ಪದವೆ ಅಮ್ಮನಾಗುವಿ!
ಮಿಂದು ಅರಿವ ಶರಧಿಯಲ್ಲಿ
ಬಂದು ನಿಲುವ ಮನುಜನಲ್ಲಿ
ಕುಂದು ಕಳೆವ ಗುರುವು ಎಂಬ ಬೊಮ್ಮನಾಗುವಿ!


– ಹಟ್ಟಿ ಸಾವಿತ್ರಿ ಪ್ರಭಾಕರಗೌಡ, ಗದಗ
*****