ಅನುದಿನ ಕವನ-೬೭೩, ಕವಯತ್ರಿ:ದಿವ್ಯ ಆಂಜನಪ್ಪ, ಬೆಂಗಳೂರು

ಹಕ್ಕಿಯಂತೆ ಹಾರಾಡಿಕೊಂಡಿದ್ದ ಮನಸಿಗೆ
ಬಾ ಇಲ್ಲಿ ಎಂದು ಕರೆದು
ನಿನ್ನ ಬಣ್ಣ ಇದನ್ನು ಹೋಲುತ್ತೆ
ಎಂದು ಅದೇನೋ ಹೇಳಿ
ಒಂದು ಗುಂಪಿಗಂಟಿಸಿ
ನೀನು ಬರೀ ಹಕ್ಕಿಯಲ್ಲ
ಇಂತದೊಂದು ಬಣದ ಪ್ರತೀಕ
ಹೀಗೆಲ್ಲಾ ಹಾರಾಡಬಾರದು
ಎಲ್ಲೆಲ್ಲೊ ಹೋಗಿ ಗುಂಪುಗೂಡಬಾರದು
ನಾವೆಲ್ಲಾ ಹೀಗೀಗೆ; ನೀನೂ ಹಾಗಾಗೆ ಇರಬೇಕು

ಹ್ಞೂ ಎಂದ ಮುಗ್ಧ ಮನಸು
ಹಾಗೆಯೇ ನಡೆಯುತ್ತ ನಡೆಯುತ್ತ
ತನ್ನ ಸ್ನೇಹವೆಲ್ಲವನ್ನೂ ಬಿಟ್ಟು
ನಿಷ್ಠೆಯಿಂದ ಬಣದ ಬಣ್ಣವನ್ನೇ
ಹೊದ್ದು ಕೂತಿರಲು
ರೆಕ್ಕೆಗಳು ಕ್ಷಿಥಿಲಗೊಂಡಿದ್ದು
ಅರಿವಾಗಲೇ ಇಲ್ಲ
ಹಕ್ಕಿ ಈಗ ಹಾರಲಾರದ ಕುಂಟು ಮನಸ್ಸು

ಹೀಗೆ ಗುಂಪಿನೊಳಗೆ ಮಂಕಾಗಿ
ಒಂಟಿಯಾದ ದಿನಗಳಲ್ಲಿ
ಎಂದೊ ಒಮ್ಮೆ ತನ್ನ ರೆಕ್ಕೆಗಳು
ನೆನಪಾದದ್ದು ನಿಜವೇ
ತಾನು, ಅದು ಹೇಗೆ ಹಾರುತ್ತಿದ್ದೆ
ಅಷ್ಟು ಕ್ಷಮತೆ ಇದ್ದದ್ದಾರರೂ ಹೇಗೆ?!
ತಾನೆಯೇ? ಹಾಗೆ ಮೋಡ ಚುಂಬಿಸುವ
ಸಾಹಸಕ್ಕಿಳಿಯುತ್ತಿದ್ದದ್ದು…?!..
ಬಿಳಚಿ ಹೋದ ಹಕ್ಕಿಗೆ
ತನ್ನ ಕಿರಿದಾದ ರೆಕ್ಕೆಗಳ ಸವರಿ
ಏನೋ ರೋಮಾಂಚನ..

ಹ್ಞೂ ತಾನೂ ಗಾಳಿಯೊಳು
ಲೀಲಾಜಾಲವಾಗಿ ಹಾರಾಡಿದ್ದು ನಿಜವೆ
ತನ್ನಬೆನ್ನಿಗಷ್ಟು ಬೆಂಬಲಿಗರು
ಮುಂದೆ ಕರೆಯುತ್ತಿದ್ದ ಹಿರಿಯ ರೆಕ್ಕೆಗಳು
ಹಾದಿಯುದ್ದ ಹೂ ಕಂಪು, ಗಾನ ಅಕ್ಷಯ
ಗತ ಕಾಲದ ಉದ್ದೇಶಗಳು
ಪೂರ್ಣಗೊಳ್ಳದ ಓಟಗಳು
ನೆನಪಿನ ರಸಮಾವು ತಿನ್ನುತ್ತ
ಹಾರುವ ಬಯಕೆ ಹೊತ್ತು
ನಿಂತಲ್ಲೇ ಕುಪ್ಪಳಿಸುತ್ತಿದೆ…
ಕ್ರಮೇಣ ಜಿಗಿತದ ಅಡಿಗಳು
ಬೆಳೆಯುತ್ತಾ….

-ದಿವ್ಯ ಆಂಜನಪ್ಪ, ಬೆಂಗಳೂರು
*****