ಅನುದಿನ ಕವನ-೬೭೬, ಕವಯತ್ರಿ: ಉಮಾ‌ ಮುಕುಂದ್, ಬೆಂಗಳೂರು, ಕವನದ ಶೀರ್ಷಿಕೆ: ಅಲ್ಲೂ….ಇಲ್ಲೂ

ಅಲ್ಲೂ.. ಇಲ್ಲೂ..

ಅಂದೊಂದು ದಿನ ಅವಳು ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು
ಕೂದಲಿಳಿಬಿಟ್ಟು ಬೀಸಿ ನಡೆದವಳು
ಥಟ್ಟನೆ ಹಿಂತಿರುಗಿ ತುರುಬುಕಟ್ಟಿ
ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು

ಇನ್ನೊಂದು ದಿನ ಅವರು
ಇದ್ದಕ್ಕಿದ್ದಂತೆ ಬಂದಿಳಿದಾಗ
ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ
ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು
ಮೆಣಸು ಜೀರಿಗೆ ಸಾರು ಮಾಡುಣಿಸಿದಳು

ಮತ್ತೊಂದು ದಿನ ಇವರು ಹಾಡು
ಹಾಡೆಂದು ಕಾಡಿದಾಗ ಒತ್ತರಿಸಿ ಬಂದ
‘ನಾನು ಬಳ್ಳಿಯ ಮಿಂಚ’
ಕತ್ತಲ್ಲೆ ಕತ್ತರಿಸಿ
‘ರಾಮ ಮಂತ್ರವ..’ ಹಾಡಿ ಮುಗಿಸಿದಳು

ಕೊನೆಗೊಂದು ದಿನ
ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ
ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ
ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ ಈಗಿಂದೀಗಲೆ ನಿಂತೇಹೋದರೆ ಉಸಿರು
ಏನೆಂದುಕೊಳ್ಳುವರೊ ಜನರು
ಎಂದೆಣಿಸಿ.. ಎಣಿಸಿ..
ಧಡಕ್ಕನೆದ್ದು ಬಾಗಿಲು ತೆರೆದಿಟ್ಟು
‘ಜ಼ಿಂದಗಿ ಭರ್ ಭೂಲೇಂಗಿ ನಹಿ..’
ಎಂದು ದೊಡ್ಡಕೆ ಹಾಡತೊಡಗಿದಳು.


-ಉಮಾ ಮುಕುಂದ್, ಬೆಂಗಳೂರು
*****