ಅನುದಿನ‌ ಕವನ-೬೭೭, ಚಿತ್ರ &ಕವನ: ಸಂಘಮಿತ್ರೆ ನಾಗರಕಟ್ಟೆ, ಮೈಸೂರು

ಸಾವಿರ ವರ್ಷಗಳಿಂದಲೂ

ಮಳೆ ಸುರಿಯುತ್ತಲೇ ಇದೆ

ಕಲ್ಲು ಮಣ್ಣು ಮನೆ ಮಠ

ಪಶು ಪಕ್ಷಿ ಕೋಟ್ಯಾಂತರ ಜೀವಗಳನ್ನು

ತನ್ನೊಡಲಲ್ಲಿ ತೊಳೆದುಕೊಂಡು

ಹೋಗುತ್ತಲೇ ಇದೆ

ಹಾಗಿದ್ದರೂ..

ಊರ ಹೊರಗಿನ ನಮ್ಮ ಗಲ್ಲಿಗಳು

ನಮ್ಮವರ ಓಣಿ-ವಠಾರಗಳು

ಲಕ್ಷಾಂತರ ಈ ಮಹಾಮಳೆಗಳ ಆರ್ಭಟಕ್ಕೆ

ಒಂದಿನಿತೂ ಶುದ್ಧ ವಾಗಲಿಲ್ಲ ಅಲ್ಲವೇ?

ಮಳೆ ಬಿಡಿ! ನಿತ್ಯ ಮಿಂದು ಮಿಂದು

ಮಿಂದು ಮೈಯಲ್ಲ ಜಡ್ಡಿಗಟ್ಟಿ ಹೋಗಿವೆ

ಸೋಪಿನ ಬಿಲ್ಲೆಗಳು ಕರಗಿ ಕರಗಿ ಚರಂಡಿಯಲ್ಲಿ

ಪ್ರವಾಹ ವಾಗಿ ಸಾಗಿವೆ ‌

ಆದರೂ ನಮ್ಮ ಕೊಳೆ ಕಳೆಯಲಿಲ್ಲ ಅಲ್ಲವೆ?

ನಾವು ನಿಮ್ಮ ಗುಡಿಯಲ್ಲಿನ ಕಲ್ಲು-

ವಿಗ್ರಹ ಗಳಂತೆ

ನಿತ್ಯ ಅಭಿಷೇಕ ವನ್ನು ಮಾಡಿಕೊಂಡಿದ್ದೇವೆ

ಬರಿಯ ನೀರು ಹಾಲು-ತುಪ್ಪ ಬೆಣ್ಣೆಗಳಿಂದ ಮಾತ್ರವಲ್ಲ

ಬಿಸಿ ನೆತ್ತರಿನಿಂದ…!

ಆದರೂ ನಮ್ಮ ಕೊಳೆ ಕಳೆಯಲಿಲ್ಲ

ಅಲ್ಲವೆ??

ನನಗೆ ಗೊತ್ತು, ಮಹಾ ಮಳೆಗೆ

ಹಿಮ ಪ್ರವಾಹಕ್ಕೆ ಜಗತ್ತಿನ ಜೀವ ಜಂತುಗಳೆಲ್ಲ

ತೊಳೆದುಹೋದರೂ ನಮ್ಮವರ ಕೊಳೆ ಮಾತ್ರ

ಕಳೆಯಲಾರದೆಂದು

ಇನ್ನೂ ಸಾವಿರ ವರ್ಷ ಕಳೆದರೂ

ಲಕ್ಷ ಕೃತಿಗಳು ಬಂದರೂ

ನಮ್ಮನ್ನು ನಾವು ತೊಳೆದುಕೊಳ್ಳುತ್ತಲೇ

ಇರಬೇಕೇಂದು

ನಾವೀಗ ಜಗತ್ತಿನಲ್ಲಿ ಏನನ್ನಾದರೂ ತೊಳೆಯುವುದಿದ್ದರೆ

ನೀರಿನಿಂದಲ್ಲ ನಿಗಿ ನಿಗಿ ಕೆಂಡಗಳಿಂದ

ನಮ್ಮ ಕರುಳಿಗೆ ಹತ್ತಿದ ಬೆಂಕಿಯನ್ನ

ಚರ್ಮಕ್ಕೆ ಅಂಟಿಸಿಕೊಂಡು – ನಿಮ್ಮ

ಶಾಸ್ತ್ರ ಪುರಾಣ ಗುಡಿ ಗೋಪುರ

ಸೌಧ ಮಹಲುಗಳ ತೊಳೆಯುತ್ತೇವೆ!

ನಮ್ಮವರ ರಕ್ತ ಕಣ್ಣೀರು ಬೆವರಿನ

ಮಹಾಮಳೆಗೂ ನಿಮ್ಮ ಎದೆಯೊಳಗಿನ

ಕೊಳೆ ಶುದ್ಧ ವಾಗದಿದ್ದರೆ

ನಾವು ನಿಮ್ಮವೇದ ಉಪನಿಷತ್ತು ತಂತ್ರ ಮಂತ್ರ

ಮಡಿ ಮೈಲಿಗೆ, ಜಪ ನೈವೇದ್ಯ

ಎಲ್ಲವನ್ನು ನಿರಂತರವಾಗಿ ತೊಳೆಯುತ್ತಲೇ ಇರುತ್ತೇವೆ!

(ಬಳ್ಳಾರಿಯಲ್ಲಿ ಈಚೆಗೆ ಜರುಗಿದ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ವಾಚಿಸಿದ ಜನಪ್ರಿಯ ಕವನವಿದು)

-ಸಂಘಮಿತ್ರೆ ನಾಗರಕಟ್ಟೆ, ಮೈಸೂರು
*****