ತೊಗಲುಗೊಂಬೆ ಕಲಾವಿದೆ ಬೆಳಗಲ್ಲು ಮಹಾಲಿಂಗಮ್ಮ ವಿಧಿವಶ

ಬಳ್ಳಾರಿ, ನ.12:ತೊಗಲುಗೊಂಬೆ ಹಿರಿಯ ಕಲಾವಿದೆ ನಗರದ ಶ್ರೀಮತಿ ಬೆಳಗಲ್ಲು ಮಹಾಲಿಂಗಮ್ಮ ಅವರು ಶುಕ್ರವಾರ ರಾತ್ರಿ ವಿಧಿವಶರಾಗಿದ್ದಾರೆ.
ಮಹಾಲಿಂಗಮ್ಮ ಅವರಿಗೆ 86 ವರ್ಷವಾಗಿತ್ತು.
ಪತಿ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ, ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.
ಶನಿವಾರ ಮಧ್ಯಾಹ್ನ 3 ಗಂಟೆಗೆ ಬಳ್ಳಾರಿಯ ಕೌಲಬಜಾರ್ ರುದ್ರಭೂಮಿ ಯಲ್ಲಿ ಅಂತಿಮ‌ ಸಂಸ್ಕಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಮ್ಮ ಪತಿ ಶ್ರೀ ಬೆಳಗಲ್ಲು ವೀರಣ್ಣ ಅವರ ಸಾಧನೆ, ಯಶಸ್ಸಿನಲ್ಲಿ ಇವರ ಪ್ರೋತ್ಸಾಹವಿತ್ತು. ಹತ್ತು ವರ್ಷಗಳ ಹಿಂದೆ ಮಹಾಲಿಂಗಮ್ಮ ಅವರು ತಮ್ಮ ಪತಿ ಬೆಳಗಲ್ಲು ವೀರಣ್ಣ ನೇತೃತ್ವದ ತಂಡದೊಂದಿಗೆ ಸ್ವಿಟ್ಜರ್ಲೆಂಡ್‌‌ ಗೂ ತೆರಳಿ ತೊಗಲುಗೊಂಬೆ ಪ್ರದರ್ಶನ ನೀಡಿದ್ದರು.
ಅಳಿಯ, ಪ್ರಸಿದ್ಧ ಗಾಯಕ ಪಂ. ವೆಂಕಟೇಶ ಕುಮಾರ್, ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಟಿ ಕೆ ಗಂಗಾಧರ ಪತ್ತಾರ, ಗುಲ್ಬರ್ಗಾ ವಿವಿ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಮಹಾನಗರ ಪಾಲಿಕೆ ಸದಸ್ಯ ಎಂ. ಗೋವಿಂದರಾಜುಲು, ಕಾಂಗ್ರೆಸ್ ಯುವ ಮುಖಂಡ ಬಿ.ಸೋಮು ಸೇರಿದಂತೆ ಹಲವು ಗಣ್ಯರು ಅಂತಿಮ‌ ನಮನ ಸಲ್ಲಿಸಿದರು.
ಸಂತಾಪ: ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಮೊಬೈಲ್ ಮೂಲಕ ನಾಡೋಜ ಬೆಳಗಲ್ಲು ವೀರಣ್ಣ ಅವರನ್ನು ಸಂಪರ್ಕಿಸಿ ಸಂತಾಪ ಸೂಚಿಸಿದರು. ಹಿರಿಯ ರಂಗ ಕಲಾವಿದ ಹಂದ್ಯಾಳ್ ಪುರುಷೋತ್ತಮ ಸೇರಿದಂತೆ ಹಲವು ಗಣ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
*****