ಕೂಡ್ಲಿಗಿ, ನ.12: ಓಬವ್ವ ಅರಸೊತ್ತಿಗೆಯ ಮನೆತನದವಳಲ್ಲ, ಗುಡೇಕೋಟೆ ಸಂಸ್ಥಾನದ ಕಹಳೆ ಸೇವಕನ ಮಗಳು, ಹೋರಾಟ ಮಾಡಿದ್ದು ಅನ್ನ, ಆಶ್ರಯ ನೀಡಿದ ಚಿತ್ರದುರ್ಗ ಪಾಳೇಗಾರ ಸಂಸ್ಥಾನ ರಕ್ಣಣೆಗಾಗಿ ಇಂತಹ ವೀರವನಿತೆಗೆ ಜನ್ಮನೀಡಿದ ಪುಣ್ಯ ಭೂಮಿ ಗುಡೇಕೋಟೆ ಎಂದು ಪತ್ರಕರ್ತ ಭೀಮಸಮುದ್ರ ರಂಗನಾಥ ಅವರು ಹೇಳಿದರು.
ತಾಲೂಕಿನ ಗುಡೇಕೋಟೆ ಗ್ರಾಮದ ಸರ್ಕಾರಿ ಪಿಯು ಕಾಲೇಜ್ ನಲ್ಲಿ ಶುಕ್ರವಾರ ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಅಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಭುತ್ವ ವ್ಯವಸ್ಥೆಯಲ್ಲಿ ಪಂಡಿತರು ಮತ್ತು ವಿದ್ವಾಂಸರು ಆಶ್ರಯ ನೀಡಿದ ರಾಜನ ಕುರಿತು ವೈಭವೀಕರಿಸಿ ಇತಿಹಾಸ ದಾಖಲಿಸುವುದು ಸಹಜ. ಆದರೆ, ಶ್ರಮಿಕರು, ಸೇವಕರು ಕುರಿತು ದಾಖಲಿಸಲು ನಿರ್ಲಕ್ಷ್ಯ ಮಾಡಿದ್ದಾರೆ ದೂರಿದರು. ವೀರವನಿತೆಯಾಗಿದ್ದರೂ ಛಲವಾದಿ ಎಂಬ ತಳ ಸಮುದಾಯಕ್ಕೆ ಸೇರಿದ ಮಹಿಳೆಯಂಬ ಕಾರಣಕ್ಕೆ
ಓಬವ್ವನ ಬಗ್ಗೆ ಇತಿಹಾಸ ದಾಖಲಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎಂದು ರಂಗನಾಥ್ ನೋವು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ನಾಗರಾಜ ಕೋಟ್ಟಪ್ಪನವರ್ ಮಾತನಾಡಿದರು.
ಕೂಡ್ಲಿಗಿ ಸಮಾಜಸೇವಕ ಸುನೀಲ್ ಗೌಡ ಅವರ ತಾಯಿಯ ಜ್ಞಾಪಕಾರ್ಥವಾಗಿ ಲೇಖಕ ಭೀಮಣ್ಣ ಗಜಾಪುರ ರಚನೆಯ ‘ಗುಡೇಕೋಟೆ ಗಟ್ಟಿಗಿತ್ತಿ ಒನಕೆ ಓಬವ್ವ’ ಕೃತಿಗಳನ್ನು ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಚಿದಾನಂದಪ್ಪ, ಸಿದ್ದಲಿಂಗಪ್ಪ, ಬಸವರಾಜ, ನಳಿನಾ, ರಾಜೇಶ್ ಸೇರಿದಂತೆ ಹಲವರು ಇದ್ದರು.
*****