ಮಕ್ಕಳೇ ನಮ್ಮನ್ನು ಕ್ಷಮಿಸಿ….🙏
ನಾವು ಕೆಲವು ದೊಡ್ಡವರು ವಿವಿಧ ವೇಷಗಳಲ್ಲಿ ಇರುವವರು ನಿಮ್ಮೊಂದಿಗೆ ಕೆಟ್ಟದಾಗಿ, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದೇವೆ. ಕಾವಿ ಬಟ್ಟೆ ತೊಟ್ಟೂ ಕೂಡ ನಿಮ್ಮ ಮೇಲೆ ಮೃಘಗಳಾಗಿ ಎರಗಿದ್ದೇವೆ. ಅಪಮಾನಿಸಿ, ದೌರ್ಜನ್ಯ ಎಸಗಿದ ಗಾಯ ಹಸಿಯಾಗಿರುವಾಗಲೇ ನಿಮ್ಮನ್ನು ಮತ್ತೆ ಮತ್ತೆ ಮಾತಾಡಿಸಿ ಆ ಭಯಂಕರ ನೆನಪುಗಳನ್ನೇ ಕೆದಕಿ ಕನಿಷ್ಠ ಮಾನವ ಸಂವೇದನಾಶೀಲತೆ ಇಲ್ಲದವರಂತೆ ನಡೆದುಕೊಂಡಿದ್ದೇವೆ.
ನಿಮ್ಮ ಪ್ರತಿಯೊಂದು ನಿಟ್ಟುಸಿರು, ನಿಮ್ಮ ಆ ಕಣ್ಣೀರು, ಎಲ್ಲದಕ್ಕೂ ನಮಗೆ ಶಿಕ್ಷೆ ಕಾದಿದೆ. ನಮ್ಮ ಕಾನೂನುಗಳು ನಮಗೆ ಶಿಕ್ಷೆ ವಿಧಿಸಲು ವಿಫಲವಾದರೂ “ನೈಸರ್ಗಿಕ ನಿಯಮ, ದೈವ ನಿಯಮಗಳಿಂದ ತಪ್ಪಿಸಿಕೊಳ್ಳಲು ನಮಗೆ ಚಾನ್ಸೇ ಇಲ್ಲ. ನೀವು ಪವಿತ್ರ ಜೀವಿಗಳಾಗಿ ಬಂದು ನಮ್ಮ ದೌರ್ಜನ್ಯಗಳಿಗೆ ತುತ್ತಾಗಿದ್ದು ಖಂಡಿತ ನಿಮ್ಮ ಕರ್ಮವಲ್ಲ, ಅದು ಧರ್ಮದಿಂದ ನಡೆಯುವಲ್ಲಿ ನಮ್ಮ ಸೋಲು. ನೋಡ್ತಾ ಇರಿ ನಮ್ಮ ಈ ಬೇಜವಾಬ್ದಾರಿತನಕ್ಕೆ ನಮಗೆ ಖಂಡಿತ ಶಿಕ್ಷೆಕಾದಿದೆ.ನಿಮ್ಮ ಮೇಲಿನ ಈ ದೌರ್ಜನ್ಯ, ಅಪಮಾನ, ನಿಮ್ಮ ಸಹಜ ಮಾನವ ಹಕ್ಕುಗಳ ,ಮಕ್ಕಳ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಲು ವಿಫಲರಾದ ನಮಗೆ, ಕೇವಲ ಅಧಿಕಾರ, ಅಂತಸ್ತು ಎಂದು ಕಣ್ಣು ಮುಚ್ಚಿದ ನಮಗೆ ಖಂಡಿತ ಮೋಕ್ಷ ಸಿಗುವುದಿಲ್ಲ. ಮುಂದಿನ ಜೀವನಗಳಲ್ಲಿ ನಿಮ್ಮಿಂದ ರೊಟ್ಟಿ ತುಣುಕು ಹಾಕಿಸಿಕೊಳ್ಳುವ ಬೀದಿ ನಾಯಿಗಳಾಗಿಯೂ ನಿಮ್ಮ ಮುಖ ನೋಡಲು ನಮಗೆ ಸಾಧ್ಯವಿಲ್ಲ. ನಿಮ್ಮ ದೇಹಗಳ ಮೇಲೆ ಆದ ಗಾಯ ಮಾಯಬಹುದು, ನಾವು ನಮ್ಮ ಬಟ್ಟೆ ಮೇಲಿನ ಕಲೆಗಳನ್ನು ತೆಗೆದುಕೊಳ್ಳಬಹುದು ಆದರೆ ನಿಮ್ಮ ಮನಸ್ಸಿನ ಮೇಲಾದ ಗಾಯ ಖಂಡಿತ ಹೋಗಲಾರದು ಅದೇ ರೀತಿ ಜನ್ಮ ಜನ್ಮಾಂತರಗಳ ವರೆಗೆ ನಿಮ್ಮ ಮೇಲೆ ದೌರ್ಜನ್ಯ ಎಸಗಿದ ಪಾಪ ಕರ್ಮಗಳಿಂದ ನಾವು ತಪ್ಪಿಸುಕೊಳ್ಳಲು ಸಾಧ್ಯವೇ ಇಲ್ಲ.
ನಾವಂತೂ ನಾಗರಿಕ ಸಮಾಜವಾಗಿ ನಿಮಗೆ ಸುರಕ್ಷಿತ ಶಾಲೆ, ಹಾಸ್ಟೆಲ್, ಸಾರಿಗೆ, ಪೌಷ್ಟಿಕ ಆಹಾರ ಕೊಡಲು ವಿಫಲರಾಗಿದ್ದೇವೆ. ನಮ್ಮ ಸುಭಿಕ್ಷ ರಾಜ್ಯವೊಂದರಲ್ಲೇ ನಿಮ್ಮ ಪೈಕಿ 14 ಲಕ್ಷ ಆರರಿಂದ ಹದಿನಾಲ್ಕನೆಯ ವಯೋಮಾನದ ಬಾಲಕ ,ಬಾಲಕಿಯರನ್ನು ನಮ್ಮ ಶಾಲೆಗಳಿಗೆ ಸೇರಿಸಿಕೊಳ್ಳಲು, ಶಾಲೆಗೆ ಬಂದ ನಿಮ್ಮನ್ನು ಶಾಲೆಯಲ್ಲಿ ಉಳಿಸಿಕೊಳ್ಳಲು,ಕನಿಷ್ಠ ಕಡ್ಡಾಯ ಶಿಕ್ಷಣ ನೀಡಲು ನಮಗೆ ಸಾಧ್ಯವಾಗಿಲ್ಲ. ಕ್ಷಮಿಸಿ ಮಕ್ಕಳೇ ನಿಮಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರುವ ನೈತಿಕತೆ ನಮಗಿಲ್ಲ.
ಆದರೆ ಸುಂದರ ನಾಳೆಗಳು ನಿಮ್ಮವಾಗಲಿ, ಬುದ್ಧ, ಬಸವಣ್ಣ, ಬಾಬಾಸಾಹೇಬರಂತಹ ಮಹಾ ಚೇತನಗಳು ನಿಮಗೆ ಚೈತನ್ಯ ತುಂಬಲಿ.
ನಿಮಗೆ ಎಲ್ಲ ದೈವಗಳ ರಕ್ಷಣೆ ಸಿಗಲಿ
-ಸಂಘಸೇನಾ ವರ್ಧನ್, ಧಾರವಾಡ
*****
thanks