ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ -ಶೋಭ ಮಲ್ಕಿಒಡೆಯರ್, ಕವಯತ್ರಿ, ಹೂವಿನ ಹಡಗಲಿ

ಮಕ್ಕಳ ದಿನಾಚರಣೆ-2022

ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅವರ ಸಹನೆ ಸಂಯಮ ಶಿಸ್ತು ಸ್ನೇಹ ಸದಾ ನಗುವಿನ ಮನಸ್ಸು ಸಂತೃಪ್ತಿಯ ಸಖ್ಯ. ಕಲ್ಲನ್ನು ಕಡೆದು ಶಿಲೆಯಾಗಿಸುವ ಶಿಲ್ಪಿಯ ಕೈಚಳಕದಂತೆ, ಮಕ್ಕಳನ್ನು ತಿದ್ದಿ ತೀಡಿ ಸಮಾಜ ಗುರುತಿಸುವಂತೆ ಮಾಡುವ ಚಾಣಾಕ್ಷತನ ನಿಜಕ್ಕೂ ಅತ್ಯಧ್ಬುತ.
ಗುರು ದೇವೋಭವ ಎಂಬ ವೇದಗಳ ಸಾರದಂತೆ ಜವಾಬ್ದಾರಿಯಿಂದ ಅಕ್ಷರಗಳ ದೀಪ್ತಿಯೊಂದಿಗೆ ಪಾಠಗಳ ಜೊತೆಗೆ ಆಟವ ಆಡಿಸುತ್ತ ಮಕ್ಕಳ ಮನಸ್ಸನ್ನು ಅರಿತು ಅವರೊಂದಿಗೆ ಬೆರೆಯುವ ಜಾಣ್ಮೆ ಅದಮ್ಯ. ಗುರುವೆಂದರೆ ಜ್ಞಾನದ ಸಿರಿ ಅವರ ಅನುಭವಗಳ ಸೇರಿಸಿ ಅಕ್ಷರಗಳ ಪೋಣಿಸಿ ವಿದ್ಯೆಯ ರುಚಿ ಹೆಚ್ಚಿಸುವ ಗುರುದೇವರಿಗೆ ಶರಣು.
ಇನ್ನು‌ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ವೂ ಕೂಡ ಅತೀ ಮುಖ್ಯ ಮತ್ತು ಅಷ್ಟೇ ಅವಶ್ಯ,
ಮಕ್ಕಳ ಮನಸ್ಸಿನ ಮುಗ್ದತೆಯನ್ನು ಅರಿತು ಮಗುವಾಗಿ ಬೆರೆತು ಅವರ ಬೇಕು ಬೇಡಗಳನ್ನು ಕಂಡು ಹಿಡಿದು ಬೆಂಬಲವಾಗಿ ನಿರಂತರ ನಿಲ್ಲುವುದು ಪ್ರಮುಖವಾಗಿ ಒಂದು ಕಡೆಯಾದರೆ ಅವರ ಅನಿಸಿಕೆಗಳಿಗೆ ಪ್ರಾಮುಖ್ಯತೆ ಕೊಡುವುದು ಇನ್ನೂ ಮುಖ್ಯ. ಕೆಲವು ಮನೆಗಳಲ್ಲಿ ತಮ್ಮ ಇಷ್ಟದಂತೆ ಮಕ್ಕಳನ್ನು ಬೆಳೆಸುವರು ಬೆಳಿಗ್ಗೆಯಿಂದ ಶಾಲೆ ನಂತರ ಮನೆಯ ಪಾಠ ಇದರ ಮಧ್ಯ ಸಂಗೀತ, ನೃತ್ಯ, ಕರಾಟೆ, ಸ್ಕೇಟಿಂಗ, ಸ್ವಿಮ್ಮಿಂಗ ಮಕ್ಕಳಿಗೆ ಇಷ್ಟವಿರಲಿ ಇಲ್ಲದಿರಲಿ ಮಕ್ಕಳು ಕಷ್ಟವಾದರೂ ಒಪ್ಪಲೇ ಬೇಕು. ಮಕ್ಕಳ ಆಟವಾದ ಬುಗುರಿ, ಚಿನ್ನಿದಾಂಡು, ಲಗೋರಿ ಎಲ್ಲವನ್ನು ಬದಿಗೊತ್ತಿ ತಮ್ಮ ಇಷ್ಟದ ಪ್ರಕಾರ ಮಕ್ಕಳಿಗೆ ಒತ್ತಡ ಹೇರಿದರೆ ಆ ಬಾಲ್ಯ ಬಾಲ್ಯದ ಗೆಳೆಯರ ಉಲ್ಲಾಸ ಉತ್ಸಾಹ ಮತ್ತೆಮರಳುವುದೆ? ಹೀಗಾಗಿ ಬಾಲ್ಯದ ಆಸೆಯ ಚಿವುಟದೆ ಮುಗ್ದತೆಯ ಮನಸ್ಸಿಗೆ ಖುಷಿಯಿಂದ ನೀರೆರೆದು ಪೋಷಿಸಿ, ಆಗ ಮಕ್ಕಳ ಮನಸ್ಸನ್ನು ಗೆಲ್ಲುವುದರಲ್ಲಿ ಯಾವ ಸಂದೇಹವು ಇರುವುದಿಲ್ಲ.ಅದರ ಬದಲು ವಿರುದ್ಧವಾಗಿ ಹೆತ್ತವರ ಇಷ್ಟದಂತೆ ಒಲ್ಲದ ವಿಷಯಗಳ ಒತ್ತಡ ಹೇರಿದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಮಕ್ಕಳಲ್ಲಿ ಆಸಕ್ತಿ ಸೊರಗುತ್ತದೆ. ಹೀಗಾಗಿ ಮಕ್ಕಳ ವಿಕಸನಕ್ಕೆ ಶಿಕ್ಷಕರ ಮತ್ತು ಪೋಷಕರ ಪಾತ್ರ ಇಬ್ಬರದೂ ಮುಖ್ಯ ಖುಷಿಯಿಂದ ನಿರ್ವಹಿಸಿದಾಗ ಮಕ್ಕಳು ಸದಾ ಹಸನ್ಮುಖಿ.
ಹಿಂದಿನ ಕಾಲದಲ್ಲಿ ಶಿಕ್ಷಣ ಎಂಬುದು ಕೇವಲ ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಕಾಲ ಬದಲಾದಂತೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕೆಂಬ ಒತ್ತಾಸೆಯಿಂದ ಅಸಂಖ್ಯಾತ ಶಿಕ್ಷಣ ಕೇಂದ್ರಗಳು ಸ್ಥಾಪನೆಗೊಂಡು ವಿದ್ಯಾರ್ಥಿಗಳು ಪುಂಖಾನುಪುಂಖವಾಗಿ ಹೊರ ಬರುತ್ತಿದ್ದಾರೆ ಆದರೆ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲವೆಂಬ ಕೊರಗು ಮತ್ತು ಅಭದ್ರತೆ ಎಲ್ಲಾ ಕಡೆಗೆ ಕಾಣುತ್ತದೆ. ಹೀಗಾಗಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಸ್ವಯಂ ಉದ್ಯೋಗಕ್ಕೆ ಒತ್ತು ನೀಡಿ ಶಿಕ್ಷಣ ನೀತಿಯನ್ನು ಬದಲಿಸಬೇಕಿದೆ. ವಿದ್ಯಾರ್ಥಿಗಳು ಮತ್ತು ಹೆತ್ತವರು ಸಹ ಸರಕಾರಿ ನೌಕರಿ, ಉನ್ನತ ನೌಕರಿ ಎಂದು ಪ್ರಲೋಭನೆಗೆ ಒಳಗಾಗದೇ ಜೀವನಕ್ಕಾಗಿ ಶಿಕ್ಷಣ ಎಂಬ ಮನಸ್ಥಿತಿಯನ್ನು ಅರಿಯಬೇಕಿದೆ. ಈ ವಿಚಾರದಲ್ಲಿ ಶಿಕ್ಷಕರು ಪೂರ್ವಭಾವಿಯಾಗಿಯೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೃಢತೆಯನ್ನು ತುಂಬಬೇಕಿದೆ ಹಾಗೆ ತಂದೆ ತಾಯಿಯರು ನಮ್ಮ ಮಕ್ಕಳು ನಾವು ಹೇಳಿದಂತೆ ನಡೆಯಬೇಕು, ನಾವು ತೋರಿದ ದಾರಿಯಲ್ಲೇ ಸಾಗಬೇಕು ಎಂಬ ಹುಂಬತನದ ಲೆಕ್ಕಾಚಾರವ ಬದಿಗೊತ್ತಿ ಅವರ ಮನಸ್ಸಿನ ಆಳವನ್ನು ಅರಿತು ಅವರಂತೆ ನಡೆದುಕೊಂಡಾಗ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗುವುದರಲ್ಲಿ ಸಂದೇಹವಿಲ್ಲ.

-ಶೋಭಾ ಮಲ್ಕಿ ಒಡೆಯರ್ ✍🏻
ಹೂವಿನ ಹಡಗಲಿ