ನೀ ಮುಟ್ಟದ ಮಲ್ಲಿಗೆ ನನ್ನ ಮುಡಿಗೇಕೆ ಇನಿಯಾ…!?
ನಾ ನಿನ್ನ ಬಯಸಲು
ನನಗೆ ಅಂತಹ ಮಹಾಕಾರಣವೇನು
ಇರಲಿಲ್ಲ
ಯಾರಲ್ಲೂ ಇರದ ಒಂದು ಅಪರೂಪದ
ಗುಣ ನಿನ್ನಲ್ಲಿತ್ತು
ಅಷ್ಟೇ ನನಗೆ ಸಾಕಿತ್ತು
ಊರಿಗೆ ನೂರಾರು ದೊರೆಗಳಿದ್ದರೂ
ನನ್ನ ಪಾಲಿಗೆ ನೀ ದೊರೆಯಷ್ಟೆ ಅಲ್ಲ
ಧರೆಗೆ ಮಿಗಿಲಾದ ನೇಗಿಲಂತಾಗಿದ್ದೆ
ನಿನ್ನ ಮೆಚ್ಚುವವಳಲ್ಲಿ ನಾನೇ
ಮೊದಲಿಗಳು ಅಲ್ಲಾ
ಕೊನೆಯವಳಂತೂ ಅಲ್ಲವೇ ಅಲ್ಲಾ
ಅಂತಹ ಸೂಜಿಗಲ್ಲಿನ
ಸಂಜೆಮಲ್ಲಿಗೆಯೆ ಆಗಿದ್ದೆ ನೀನು
ನೂರಾರು ದೇವರಿಗೆ ಹರಕೆ ಹೊತ್ತಿದ್ದೆ
ವ್ರತಗಳ ಮಾಡಿದ್ದೆ
ಉಪವಾಸವಂತೂ ಲೆಕ್ಕವೇ ಇಲ್ಲ
ಇದನ್ನೆಲ್ಲಾ ಮೀರಿ ನಿನ್ನ ಸೆಳೆದ
ಮೋಹದ ಸೆಳೆತವಾದರೂ ಯಾವುದು?
ನಿನ್ನ ಪರವಶಗೊಳಿಸಲಾಗದ
ನನ್ನ ಕೊರತೆಯಾದರೂ ಯಾವುದೆಂದು
ತಿಳಿಯುತಿಲ್ಲ ನನಗೆ.
ನಿನ್ನ ಒಂದೇ ಒಂದು ಹಾಡಿನ ದನಿಯ
ನಿನಾದಕ್ಕೆ
ತಲೆ ತೂಗೋ
ನಾಗರಹೆಡೆಯಂತೆ ನಿಂತಲ್ಲೇ,ಕುಳಿತಲ್ಲೇ
ನಿನ್ನ ಮಾಂತ್ರಿಕತೆಗೆ ಭಾವಪರವಶಳಾಗಿ
ಮೈ ಮರೆಯುತ್ತಿದ್ದ ನನಗಷ್ಟೇ ಸಾಕಿತ್ತು
ಬಹುಜನ್ಮದ ಪೂಜಾಫಲದಂತೆನಿಸಿ
ಬಿಡುತಿತ್ತು
ಈ ಹುಚ್ಚುತನ ನಿನ್ನ ತಿರಸ್ಕಾರವನ್ನೂ
ಮೋಸವನ್ನು ಕ್ಷಮಿಸಿ ಮರೆಸಿಬಿಡುತಿತ್ತು
ಅವರೆಂದೂ ನನ್ನೋರು ಎಂದೆಂದೂ ನನ್ನೋರು
ಎನುವ ಹಾಡಂತೂ ನನ್ನ
ದಿನನಿತ್ಯದ ಶ್ಲೋಕವಾಗಿತ್ತು
ಮನಸಿನಲ್ಲೇ ಎಂದೋ ನಿನ್ನ ವರಿಸಿ
ನಾ ನಿನಗೆ ಶಾಶ್ವತ ಮಡದಿಯೆಂದು
ನನಗೆ ನಾನೆ ಘೋಷಿಸಿಕೊಂಡಿದ್ದೆ
ಆದರೆ ನೀ ಮಾತ್ರ ಮತ್ತೊಬ್ಬಳ ಪಾಲಾದೆ
ನಾನು ಮಾತ್ರ ಅಮ್ಮನ ಒತ್ತಾಯಕ್ಕೆ
ಕಟ್ಟುಬಿದ್ದು ಮತ್ತೊಬ್ಬನಿಗೆ ಹೆಂಡತಿಯಾಗಿ
ಎರಡು ಮಕ್ಕಳಿಗೂ ತಾಯಿಯಾಗಿದ್ದೆ
ಎರಡನೆ ಹೆಂಡತಿಯಂತೆ
ಈ ದೇಹ ಕಾಯ ಮಾತ್ರ ಗಂಡನಿಗೆ
ಮೀಸಲೇ ಹೊರತೂ
ನನ್ನ ಮನಸು ಮಾತ್ರ ನಿನಗಲ್ಲದೇ
ನನಗೂ ಕೂಡ ಸ್ವಂತವಿಲ್ಲ
ಈ ಜನುಮದಲ್ಲಿ.
ನಿನ್ನ ಜೊತೆ ಒಂದೇ ಒಂದು ತಾಸಿನ
ಜೀವನ ಸಿಕ್ಕರೆ ಸಾಕು ನನಗದು
ಸಾವಿರ ಜನುಮದ ಸಾರ್ಥಕದಂತೆ
ನೀ ಮುಟ್ಟದ ಮಲ್ಲಿಗೆಯ
ಮುಡಿಯದೇ ಮೈಲಿಗೆಯಾದೀತೆಂದು
ನನ್ನ ಹೃದಯದಲಿ ಇರಿಸಿರುವೆ
ತಲೆಯೇರಿ ಮೆರೆಯುವುದಕಿಂತ
ನಿನ್ನ ಚರಣಕಮಲದಲಿ ಪಾವನವಾಗಲೆಂದು ಬಯಸಿ
ಬರೀ ಮಲ್ಲಿಗೆ ಮಾತ್ರವಲ್ಲ
ನಿನ್ನ ಪಾದಕ್ಕೆ ನಾನು ಕೂಡ ಮೀಸಲು
ನೀ ಸಿಗುವವರೆಗೂ….!!??
– ಗಾನಾಸುಮಾ ಪಟ್ಟಸೋಮನಹಳ್ಳಿ, ಪಾಂಡವಪುರ
*****