ಮನುಷ್ಯನ ಆತಂಕ,ಉದ್ವೇಗ, ಕೋಪದ ಶಮನಕ್ಕೆ ತಾಳ್ಮೆಯೇ ಮದ್ದು   -ಡಾ.ಮಾನಕರಿ  ಶ್ರೀನಿವಾಸಾಚಾರ್ಯ

ಬಳ್ಳಾರಿ. ನ ೧೮: ಮನುಷ್ಯ  ತಾಳ್ಮೆಯನ್ನು ಅಳವಡಿಸಿಕೊಂಡು ಸಾಗಿದರೆ ಬದುಕಿನಲ್ಲಿ ಬರುವ ಆತಂಕ,ಉದ್ವೇಗ, ಕೋಪವನ್ನು ಸುಲಭವಾಗಿ ಗೆಲ್ಲಬಹುದು ಎಂದು ತೆಕ್ಕಲಕೋಟೆ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರೂ ಆದ ಸಾಹಿತಿ ಡಾ.ಮಾನಕರಿ ಶ್ರೀನಿವಾಸಾಚಾರ್ಯ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ  ಸತೀಶ್ಛಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ( ಸ್ವಾಯತ್ತ )  ಕಾಲೇಜಿನಲ್ಲಿ ಶುಕ್ರವಾರ ಕನ್ನಡ ವಿಭಾಗ ಆಯೋಜಿಸಿದ್ದ ‘ ತಾಳುವಿಕೆಗಿಂತ ಅನ್ಯ ತಪವು ಇಲ್ಲ ‘ ಎನ್ನುವ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.


ಬದುಕನ್ನು ನರಕವಾಗಿಸಿಕೊಳ್ಳದೆ ನೆಮ್ಮದಿಯಿಂದ ಬಾಳಲು ತಾಳ್ಮೆ ಅತ್ಯಂತ ಸಹಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹೊತ್ತಿನ ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿಗೆ ಸಿಲುಕಿ ಶಾಂತಿಯನ್ನು ಕಳೆದುಕೊಂಡು ಹತಾಶರಾಗುತ್ತಿದ್ದಾರೆ. ಪ್ರತಿ ಗಳಿಗೆಯಲ್ಲೂ ತಾಳ್ಮೆಯಿಂದ ಇರಬೇಕೆಂದರು. ದಾಸ ಸಾಹಿತ್ಯದ ಕಣ್ಮಣಿ ವಾದಿರಾಜರು ತಮ್ಮ ಕೀರ್ತನೆಗಳ ಮೂಲಕ ಅನುಭಾವ ಮತ್ತು ಲೋಕನೀತಿಗಳನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ ಎಂದರು.
ದುಡುಕು,ಮಿಡುಕು , ಸಿಡುಕು ಮೊದಲಾದ ದೌರ್ಬಲ್ಯಗಳನ್ನು ಮೆಟ್ಟಿ ನಿಂತು , ಧೈರ್ಯದಿಂದ, ನೈತಿಕ ಬಲದಿಂದ ಮೌಲಿಕ ಬದುಕನ್ನು ಕಟ್ಟಿಕೊಳ್ಳುವ ಮಾನಸಿಕ ಸಾಧನವೇ ತಾಳ್ಮೆ ಎಂದು ಮಾರ್ಮಿಕವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್ .ಕೆ. ಮಂಜುನಾಥ್ ರೆಡ್ಡಿಯವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು , ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತಾಳ್ಮೆಯ ಮೊರೆ ಹೋಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಅವರು, ವಿದ್ಯಾರ್ಥಿಗಳ  ವ್ಯಕ್ತಿತ್ವ ವಿಕಸನಕ್ಕೆ  ಇಂತಹ ಉಪನ್ಯಾಸ ಮಾಲಿಕೆಗಳು ತುಂಬ ನೆರವಾಗುತ್ತವೆ ಎಂದರು.
ಸಹ ಪ್ರಾಧ್ಯಾಪಕಿ ಡಾ.ಬಿ.ಜಿ.ಕಲಾವತಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಎಂ.ಎನ್ ನಿರ್ವಹಿಸಿದರು. ಉಪನ್ಯಾಸಕ ಸತ್ಯಮೂರ್ತಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಲಿಂಗಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಜ್ಯೋತಿ ಅಣ್ಣಾರಾವ್ , ಮಂಜುನಾಥ ಉಲವತ್ತಿ ಶೆಟ್ಟರ್ , ಚೂಡಾಮಣಿ , ಉಪನ್ಯಾಸಕರಾದ ಡಾ.ಕೆ.ಬಸಪ್ಪ ,ಮಹಾಂತೇಶ , ಹುಲುಕುಂಟೇಶ್ವರ , ಗೋವಿಂದ , ಮೇಘರಾಜ ಮತ್ತಿತರರು ಉಪಸ್ಥಿತರಿದ್ದರು .
*****