ಅನುದಿನ ಕವನ-೬೮೮, ಕವಿ:ನಾಗೇಶ ಜೆ ನಾಯಕ, ಸವದತ್ತಿ, ಕವನದ ಶೀರ್ಷಿಕೆ: ರೆಕ್ಕೆ ಬಲಿತ ಹಕ್ಕಿ

ರೆಕ್ಕೆ ಬಲಿತ ಹಕ್ಕಿ

ಈಗಷ್ಟೇ
ಮೊಟ್ಟೆಯೊಡೆದು ಹೊರಬಂದು
ಕತ್ತು ತಿರುಗಿಸುತ್ತಾ, ಕಣ್ಣಗಲಿಸಿ
ಜಗತ್ತು ನೋಡಿದ ಪುಟ್ಟ ಹಕ್ಕಿಯ
ರೆಕ್ಕೆಗಳೀಗ ಬಲಿತಿವೆ
ಬಾನೆತ್ತರ ನೆಗೆಯುವ ಕನಸಿಗೂ
ಜೀವ ಬಂದಿದೆ

ಮೊದಲಾದರೆ….
ತಾಯಿ ಹಕ್ಕಿಯ ಜೊತೆ
ಕುಪ್ಪಳಿಸಿ ಸಂಭ್ರಮಿಸುತ್ತಿದ್ದ ಮರಿ
ಈಗೀಗ ಸ್ವಚ್ಛಂದ
ತಿರುಗಾಟಕ್ಕೆ ಅಣಿಯಾಗಿದೆ
ಎತ್ತರದಲ್ಲಿ ಹಾರಿ, ಗಿರಕ್ಕನೆ ತಿರುಗುವ
ಬೆರಗು, ಪುಳಕಕ್ಕೆ ಮರಿ ವಿಸ್ಮಯ

ರೆಕ್ಕೆಯಗಲಿಸಿ
ಹಾರಲು ಕಲಿತ
ಕರುಳ ಕುಡಿ ಕಂಡು
ತಾಯ ಹಕ್ಕಿಗೆ ಕಣ್ತುಂಬ ಖುಷಿ

ಎಷ್ಟೇ ಎತ್ತರೆತ್ತರಕ್ಕೇರಲಿ ಮರಿ
ರೆಕ್ಕೆ ಬಿಚ್ಚಿ ಹಾರಲಿ ದೂರ ದೂರ
ಹದ್ದಿನ ಕಾಕದೃಷ್ಟಿಗೆ ತಾಕದಿರಲಿ
ಬೇಟೆಗಾರನ ಬಲೆಗೆ ಬೀಳದಿರಲಿ
ಇದಿಷ್ಟೇ ತಾಯ ಹಾರೈಕೆ!

-ನಾಗೇಶ್ ಜೆ. ನಾಯಕ, ಸವದತ್ತಿ
*****