ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಸರ್ವ ಸಿದ್ಧತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ, ಮುಖ್ಯಮಂತ್ರಿ ಬೊಮ್ಮಾಯಿ ಭಾಗಿ

ಬಳ್ಳಾರಿ, ನ.19: ರಾಜ್ಯ‌ ಬಿಜೆಪಿ ನಗರದಲ್ಲಿ‌ ಭಾನುವಾರ(ನ.19) ಆಯೋಜಿಸಿರುವ ಪರಿಶಿಷ್ಟ ಪಂಗಡಗಳ(ಎಸ್.ಟಿ) ನವಶಕ್ತಿ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಉದ್ಘಾಟಿಸುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು, ಸಂಸದರು, ಶಾಸಕರು, ಬಿಜೆಪಿಯ ಹಲವು ಹಿರಿಯ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕೆ 3.20 ಲಕ್ಷ ಚದರಡಿಯ ಬೃಹತ್ ಪೆಂಡಲ್‌ ಹಾಕಲಾಗಿದೆ. 60 ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗಿದೆ. ಸುಮಾರು 10 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತು ಸಾವಿರ ಬಸ್ಸು, ಇಪ್ಪತ್ತು ಸಾವಿರಕ್ಕೂ ಹೆಚ್ಚು ಬೈಕ್ ಗಳ ಮೂಲಕ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹೋಬಳಿ, ತಾಲೂಕು, ಜಿಲ್ಲಾ ಕೇಂದ್ರಗಳಿಂದ ಆಗಮಿಸಲಿದ್ದಾರೆ.


ಸಮಾವೇಶದಲ್ಲಿ ಯಾವುದೇ ಅಹಿತಕರ ಘಟನೆಗಳು‌ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ರಂಜಿತ್ ಕುಮಾರ್ ಬಂಡಾರು‌ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಲಕ್ಷ ಲಕ್ಷ ಜನ ಸೇರುತ್ತಿರುವುದರಿಂದ ಬಂದೋಬಸ್ತ್ ಗಾಗಿ
ನೆರೆಯ ಜಿಲ್ಲೆಗಳಿಂದಲೂ ಪೋಲೀಸರು ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮಾವೇಶದ ಅಂತಿಮ ಹಂತದ ಸಿದ್ಧತೆಗಳನ್ನು ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು, ನಗರ ಶಾಸಕ‌ಜಿ.‌ಸೋಮಶೇಖರ ರೆಡ್ಡಿ ಮತ್ತು ಪಕ್ಷದ ಜಿಲ್ಲಾ‌ಮುಖಂಡರು ಶನಿವಾರ ಮಧ್ಯಾಹ್ನ ಪರಿಶೀಲಿಸಿದರು.


ಸಮಾವೇಶದ ಹಿನ್ನಲೆಯಲ್ಲಿ ನಗರದ ಹೃದಯಭಾಗದಲ್ಲಿರುವ ಗಡಿಗೆ ಚೆನ್ನಪ್ಪ ವೃತ್ತದಿಂದ ಏಳು ಕಿ.ಮೀ‌ ದೂರವಿರುವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಾವಿರಾರು ಪಕ್ಷದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ‌ಮೂಲಕ ಆಗಮಿಸಲಿದ್ದಾರೆ.
ಪ್ರಮುಖ‌ ವಿಐಪಿ ವೇದಿಕೆ ಪಕ್ಕದಲ್ಲಿ ನಿರ್ಮಿಸಿರುವ ಸಮಾನಾಂತರ ವೇದಿಕೆಯಲ್ಲಿ ಸಮಾರಂಭ ಆರಂಭವಾಗುವ ತನಕ ಸಾಂಸ್ಕೃತಿಕ ‌ಕಾರ್ಯಕ್ರಮಗಳು‌ ಜರುಗಲಿವೆ.
*****