ಅನುದಿನ ಕವನ-೬೯೦, ಕವಿ: ✍️ಮೂಗಪ್ಪ ಗಾಳೇರ, ಮಂಗಳೂರು, ಕವನದ ಶೀರ್ಷಿಕೆ:ಒಲವ ಸಾಲು, ರೇಖಾಚಿತ್ರ:ಅಸದ್

ಒಲವ ಸಾಲು

ಯಾಕೋ ಗೊತ್ತಿಲ್ಲ
ಇತ್ತೀಚಿಗಂತೂ ನಾನು ನಾನಾಗಿ ಉಳಿದಿಲ್ಲ
ಕನಸಿಗೆ ಕವಿತೆ ಕಟ್ಟಿ, ಇರುಳ ಚುಕ್ಕಿಗೆ ಮನವ ಬಿಚ್ಚಿ
ಸರಿ ರಾತ್ರಿಯ ಸಲ್ಲಾಪ ಮರೆತು
ನನ್ನೆದೆಯ ಒಲವ ಸಾಲು
ನಿನ್ನೆದುರು ನೋಟಕ್ಕೆ ಮಗುವಾಗಿ ಮಲಗಿದೆ…..!!

ಇನ್ನೇತಕೆ ತಡ ಗೆಳತಿ
ತುಟಿಯ ಇಕ್ಕೆಲಗಳಲಿ ಸುಳಿವ ಸುಳಿಗಾಳಿಗೆ
ನನ್ನ ಕವಿತೆಯ ಪ್ರೇಮ ಸವರಿ
ಸಂಜೆಯ ಇರುಳ ಕತ್ತಲೆಂಬ ಕುದುರೆಯನ್ನೇರಿ
ಯಾರು ಇಲ್ಲದ ಮೌನದೂರಿನಲ್ಲಿ
ನಡೆಸೋಣ ಪ್ರೀತಿಯ ಕುಶಲೋಪರಿ…….!!

ನನ್ನ ಕವಿತೆಯ ಸಾಲುಗಳೆಲ್ಲ
ನಿನ್ನ ಚಂದುಟಿಗೆ ಮೀಸಲಾಗಿ
ಸೂರ್ಯ- ಚಂದ್ರರಿಗೂ ನಾನೀಗ ವಿರೋಧಿ
ಜೊತೆಯಾಗಿ ಸಾಗುವುದೇ
ನಾ ಕಂಡ ಕತ್ತಲೆಯ ಕನಸಿಗೆ ಬೆಳಕ ಚೆಲ್ಲಿದ ಲಹರಿ…!!

ಸ್ಮಶಾನದ ಬೆಳದಿಂಗಳಲ್ಲೂ
ಸೌಂದರ್ಯ ಹುಡುಕುವ ಕವಿ ನಾನೀಗ
ಹುಣ್ಣಿಮೆಯ ಬೆಳದಿಂಗಳಗಿಂತ ಮಿಗಿಲಾದ
ಚೆಲುವೆ ನೀನೆಂಬುದು ಹಲವು ಕವಿತೆಗಳಿಗೆ ಹೊಸದಿಗಂತ
ಜೊತೆಯಾಗಿ ಸಾಗೋಣ ನಾವೀಗ
ಒಂಟಿ ನದಿಗಳೆಲ್ಲಾ ಜಂಟಿಯಾಗಿ ಸಾಗುವಂತೆ
ನಾವಿಬ್ಬರು ಸಾವಿನಾಚೆಗೂ ಇರೋಣ ಅಕ್ಕ-ಪಕ್ಕ….!!

✍️-ಮೂಗಪ್ಪ ಗಾಳೇರ, ಮಂಗಳೂರು

*****