ಚೆನ್ನೈ: ತಮಿಳುನಾಡಿನ ಎನ್ ಎಲ್ ಸಿ ನೇವೇಲಿ ಕನ್ನಡ ಸಂಘದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ, ಸಡಗರಗಳಿಂದ ಅದ್ದೂರಿಯಾಗಿ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನುರಿತ ಕಲಾವಿದರಿಂದ ಗಾಯನ, ಜನಪದ ಗೀತೆ, ನಾಡಗೀತೆ,ಚಿಕ್ಕ ಮಕ್ಕಳ ನಾಟ್ಯ ಪ್ರದರ್ಶನವನ್ನು ಪ್ರದರ್ಶಿಸಲಾಯಿತು. ಸಮಾರಂಭದ ಮುಖ್ಯ ಅತಿಥಿ ಸಿಐಎಸ್ಎಫ್ ನ ಕವಿ ಸಾಹಿತಿ ಹಾಗೂ ಗಾಯಕ ಕುಮಾರಸ್ವಾಮಿ ಹಿರೇಮಠ ಆನ್ವರಿ ಅವರು ಮಾತನಾಡಿ ತಾನೊಬ್ಬನೇ ಬೆಳೆಯಬೇಕೆನ್ನುವವನು ನಾಯಕನಲ್ಲ
ತನ್ನ ಜೊತೆಯಲ್ಲಿದ್ದವವರನ್ನು ಬೆಳೆಸಬೇಕೆಂದು ಬಯಸುವವನೇ ನಿಜವಾದ ನಾಯಕ ಎಂದು ಹೇಳಿದರು. ಸಂಘದ ಅಧ್ಯಕ್ಷ ಮಂಜುನಾಥ ಅವರು ಮಾತನಾಡಿ ಡಿ. 4ಕ್ಕೆ ಚೆನ್ನೈನಲ್ಲಿ ನಡೆಯುವ ಕನ್ನಡ ಜಾನಪದ ಸ್ಪರ್ಧೆಗೆ ಹೆಚ್ಚು ಕನ್ನಡಿಗರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಮಾರಂಭಕ್ಕೆ ಸಾಕ್ಷಿಯಾಗಿ ನೇವೇಲಿ ಕನ್ನಡ ಸಂಘದ ಉಪಾಧ್ಯಕ್ಷರು ಹಾಗೂ ವಕೀಲರು ಆದ ಶ್ರೀಮತಿ ನಾಗರತ್ನ ಕೃಷ್ಣಪ್ರಿಯ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅವರು, ಸಂಘದ ಪದಾಧಿಕಾರಿಗಳಾದ ಶಿವಪ್ರಕಾಶ್ ಅವರು, ಗುರುನಾಥ ಮುದಾಲಿ ಅವರು ಹಾಗೂ ಕನ್ನಡಿಗರಾದ ಎನ್ ಎಲ್‌ಸಿ ಯ ಹಿರಿಯ ಅಧಿಕಾರಿಗಳು, ಸಿಐಎಸ್ ಎಫ್ ಯೋಧರು, ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****