ಭಾವೈಕ್ಯತೆಯ ಕೌದಿ
ಶರದ್ ಋತುವುವಿನ ರಾತ್ರಿಯ ಆಗಸದ ಚುಕ್ಕಿಗಳಂತೆ..
ಕೌದಿಯ ದಾರಗಳು
ಅಲ್ಲಲ್ಲಿ ಮಿಂಚಿ..ಹೊಳೆಯುತ್ತಿವೆ
ವೈವಿಧ್ಯಮಯ ಹಳೆ ಬಟ್ಟೆಗಳನು
ಸೇರಿಸುತ್ತಾ..
ಬಲವಾದ ಬಟ್ಟೆ ಒಂದಿಷ್ಟು
ಸವೆದ ವಶನಗಳಷ್ಟು..
ಬಣ್ಣ-ಬಣ್ಣಗಳ ಕಾಮನ ಬಿಲ್ಲು
ಎಲ್ಲರ ನಡುವೆ ತೂರಿ ತೂರಿ
ಎದ್ದು.ಎದ್ದು
ಒಂದು ಮಾಡಿದೆ..ಆ ದಾರ.
ಎಲ್ಲವ ಕೂಡಿಸಿ ಕೌದಿಯಾಗಿಸಿದೆ
ಆ ದಾರ.
ಬೆಚ್ಚಾಗಿಸುವ ಈ ಕೌದಿಯ
ದಾರ ಸಡಿಲಾಗುತ್ತಿದೆ..
ದೂರ ದೂರ ಸರಿದ ಸೀರೆ –ದೋತರದ
ತುಂಡುಗಳು
ಬೇಸರಿಸಿ ಮುನುಗುತ್ತಿವೆ.
ಅಲ್ಲಲ್ಲಿ ತೇಪೆಯಾಗಿ
ಬೀಗುವ ಹೊಸ ಬಟ್ಟೆ ತುಣುಕುಗಳು
ನಾವೇ ಕೌದಿ, ನಮ್ಮಿಂದಲೇ ಕೌದಿ
ಎಂದೆಣಿಸಿದವೆಲ್ಲವೂ
ಅಸ್ಮಿತೆ ಕಳೆದುಕೊಂಡವರಂತೆ
ಬೆAಡಾಗಿವೆ.
ಎಲ್ಲರಿದ್ದರಲ್ಲವೇ..ಕೌದಿ?
ಎಂಬ ಮರ್ಮವರಿಯದವರು
ದಾರದ್ದೇನು ಕೆಲಸ..
ಎಂದು ನಂಟು ಸಡಲಿಸಿದ್ದಾರೆ..ಕೌದಿಯ
ಪ್ರತಿ ಬಟ್ಟೆಯೊಳಗಿನ
ಮೂಲ ನಾನಲ್ಲವೆ? ಎಂದು
ಗುನುಗುತ್ತ ದಾರ ನಲುಗಿದೆ.
ದಾರ ನಲುಗಿದೆ.ನಲುಗುತ್ತಿದೆ.
-ಡಾ. ಯು. ಶ್ರೀನಿವಾಸ ಮೂರ್ತಿ, ಬಳ್ಳಾರಿ
*****