ಲೈಕ್, ಕಾಮೆಂಟ್ ಗಳೆಂಬ ಮಾಯೆ………………..! ಬರಹ: ಸಿದ್ಧರಾಮ‌ ಕೂಡ್ಲಿಗಿ

ಫೇಸ್ ಬುಕ್ ನಲ್ಲಿ ಕೆಲವರನ್ನು ಗಮನಿಸುತ್ತಿದ್ದೇನೆ. ಕೆಲವರು ತೀರಾ ಕಾಯಿಲೆಯಾದವರಂತೆ ವರ್ತಿಸುತ್ತಿದ್ದಾರೆ.
ತಾವು ಬರೆದ ಬರಹ ಅಥವಾ ಕವಿತೆ ಅಥವಾ ಫೋಟೊಗಳಿಗೆ ಬಹಳಷ್ಟು ಜನ ಲೈಕ್ ಮಾಡಬೇಕು. ಕಾಮೆಂಟ್ ಮಾಡಬೇಕೆಂಬ ಹುಚ್ಚು ಹಂಬಲ. ಇದು ಬರಬರುತ್ತ ಗೀಳಾಗಿಬಿಡುತ್ತದೆ. ಕೊನೆಗೆ ಎಲ್ಲಿಗೆ ಬಂದು ಮುಟ್ಟುತ್ತದೆಂದರೆ ಎಷ್ಟು ಲೈಕ್ ಬಂದವು, ಕಾಮೆಂಟ್ ಬಂದವು ಎಂದು ಎಣಿಕೆ ಮಾಡುವಷ್ಟರ ಮಟ್ಟಿಗೆ.
ಕೆಲವರಂತೂ ನೇರವಾಗಿಯೆ ಹೇಳಿಬಿಡುತ್ತಾರೆ ” ಓದಲೇಬೇಕು ಲೈಕ್ ಕೊಡಲೇಬೇಕು, ಕಾಮೆಂಟ್ ಮಾಡಲೇಬೇಕು, ಇಲ್ಲದಿದ್ದರೆ ಓದಲೇಬೇಡಿ ” ಅಂತ. ಯಾಕೀ ಒತ್ತಡ, ಒತ್ತಾಯ. ಬರೆಯುವವನಿಗೆ ಎಷ್ಟು ಸ್ವಾತಂತ್ರ್ಯವಿದೆಯೋ, ಓದುವವನಿಗೂ ಇರುತ್ತದೆಂಬುದನ್ನೂ ಅರ್ಥ ಮಾಡಿಕೊಳ್ಳಬೇಕಲ್ಲವೆ ? ಚೆನ್ನಾಗಿದ್ದರೆ ಖಂಡಿತ ಮೆಚ್ಚಿಕೊಳ್ಳುತ್ತಾರೆ, ಕಾಮೆಂಟ್ ನ್ನೂ ಮಾಡುತ್ತಾರೆ. ಆದರೆ ಒತ್ತಾಯಿಸುವುದು ಬೇಡ.

ಅರಳುವುದು ಹೂವಿನ ಭಾವ. ಅದು ಯಾರನ್ನು ಮೆಚ್ಚಿಸಲಿಕ್ಕಾಗಿ, ಹೊಗಳಲೆಂದಾಗಲೀ ಅರಳುವುದಿಲ್ಲ. ಇಷ್ಟಪಟ್ಟವರು ಖಂಡಿತ ಹೇಳುತ್ತಾರೆ, ಇಷ್ಟಪಡವರು ಹೇಳುವುದಿಲ್ಲ ಅಷ್ಟೇ ತಾನೆ. ಅರಳುವುದು ಮುಖ್ಯ ಅಲ್ಲವೇ ?
ಇಷ್ಟೆಲ್ಲ ಹೇಳಲು ಕಾರಣ ಇದೇ ಒಂದು ಒತ್ತಡವಾಗಿ ತಲೆಕೆಡಿಸಿಕೊಂಡು ಫೇಸ್ ಬುಕ್ ಹಾಳಾಗಲಿ ಎಂದು ಹೋದವರೂ ಇದ್ದಾರೆ, ತಡೆಯಲಾರದೆ ಮತ್ತೆ ಮರಳಿಬಂದವರೂ ಇದ್ದಾರೆ. ಇದೂ ಸಹ ಗೀಳೇ. ನೀರು ಒಂದೇ ಸ್ಥಿತಿಯಲ್ಲಿ ನಿಧಾನವಾಗಿ ಹರಿದರೇ ಚಂದ. ಒಮ್ಮೆಲೇ ಪ್ರವಾಹ ಒಮ್ಮೆಲೇ ಬತ್ತಿಹೋಗುವುದು ಎರಡೂ ಅತಿರೇಕಗಳೇ.

ಸಾರ್ವಜನಿಕವಾಗಿ ನಮ್ಮತನವನ್ನು ಇಲ್ಲಿ ಪ್ರಕಟಿಸುತ್ತೇವೆಂದಾಗ ಎಲ್ಲದಕ್ಕೂ ಸಿದ್ಧರಿರಬೇಕಾಗುತ್ತದೆ. ಹೊಗಳಿದರೂ ಸರಿ, ಹೊಗಳದೇ ಇದ್ದರೂ ಸರಿ. ಅವರವರ ಭಾವ. ಎಲ್ಲರೂ ನನ್ನನ್ನು ಮೆಚ್ಚಲೇಬೇಕು, ಯಾರೂ ಸಹ ನನ್ನನ್ನು ತೆಗಳಬಾರದು, ಕಡ್ಡಾಯವಾಗಿ ನಾನು ಬರೆದದ್ದನ್ನು ಓದಲೇಬೇಕೆಂಬುದು ಓದುಗರ ಮೇಲೆ ಹಾಕುವ ಒತ್ತಡವಾಗುತ್ತದೆ.
ಸಾವಿರ ಲೈಕ್ ಗಳು ಬಂದವೆಲ್ಲವೂ ಶ್ರೇಷ್ಠವಲ್ಲ. ಕಾಮೆಂಟ್ ಹಾಕಿದವರೆಲ್ಲರೂ ಓದಿದ್ದಾರೆ ಎಂತಲೂ ಅರ್ಥವಲ್ಲ. ಕಡಿಮೆ ಲೈಕ್ ಬಂದವೆಲ್ಲವೂ ಕನಿಷ್ಟವೆಂತಲೂ ಅಲ್ಲ. ಕಾಮೆಂಟ್ ಮಾಡಿಲ್ಲ ಎಂದರೆ ಓದೇ ಇಲ್ಲ ಅಂತಲೂ ಅರ್ಥವಲ್ಲ.
ಇಷ್ಟಪಡುವವರು ಇಷ್ಟಪಟ್ಟೇಪಡುತ್ತಾರೆ. ತೀರಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲವೇ ?


-ಸಿದ್ಧರಾಮ ಕೂಡ್ಲಿಗಿ