ಅನುದಿನ‌ ಕವನ-೭೦೦, ಕವಯಿತ್ರಿ:ವಿ ನಿಶಾಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಅಪ್ಪ

ಅಪ್ಪ

ಮೇಲುನೋಟಕ್ಕೆ ಒರಟಾಗಿ ಕಾಣುವ ಅಪ್ಪ.            ಹೂವು ಹಣ್ಣು ತೆನೆ ಜೊತೆ                                ಸಂಬಂಧ ಬೆಳೆಸಿರುವವನು                                  ನೆಲಕ್ಕೆ ಬೇರೂರಿ ಭರವಸೆಯ                                  ಬೆಳೆ ತೆಗೆಯುವವನು

ಮೌನಿ ಅಪ್ಪ ಮಾತಿಗಿಳಿಯುವುದು
ಅಮ್ಮ ಮನೆ ಹೊಣೆಗಾರಿಕೆ ಹೊತ್ತು
ಹೈರಾಣಾದಾಗ
ಮೌನಕ್ಕೆ ಪದಗಳ ಅಗತ್ಯವೂ ಇರುವುದಿಲ್ಲ
ಜೀವನವೇ ಸಡಗರವಾಗಿರುವ ಅಪ್ಪ ಸುಮ್ಮನೇ ಕೂರುವುದು ಅಪರೂಪ

ಈ ಜಗತ್ತು ಬೆಳಕಿನ ಹಿಂದೆ ಓಡುವುದು
ಅಪ್ಪನಿಗೆ ಕತ್ತಲೂ ಜೊತೆಗಾರ
ಕತ್ತಲೋ ಬೆಳಕೋ
ತನ್ನ ಕೆಲಸವನ್ನಷ್ಟೇ ಎದುರು ನೋಡುವವನು

ದುಃಖದ ದಿನಗಳಲ್ಲೂ ಕನಸಿನ
ಗೂಡು ಕಟ್ಟುವುದರಲ್ಲಿ ನಿರತ ಅವನು
ಊರಿಗೆ ಊರೇ ನಿದ್ರೆಯಲ್ಲಿ ಮುಳುಗಿರುವಾಗಲೂ
ನಕ್ಷತ್ರದ ಎತ್ತರದಲಿ ಮಕ್ಕಳನ್ನು ಕನಸುವವನು
ಅದೆಷ್ಟು ರಾತ್ರಿಗಳನು ಖಾಲಿ
ಕನಸುಗಳ ಹುಡುಕಾಟದಲ್ಲಿ ಕಳೆದನೋ
ಅಮ್ಮ ಮಾತ್ರ ಲೆಕ್ಕ ಹೇಳಬಲ್ಲಳು

ಉಪವಾಸ ಮಲಗಿರುವುದಿದೆ
ಅಪ್ಪ ಎಷ್ಟೋ ಸಲ
ಜಿಡ್ಡು ಗಟ್ಟಿದ ಅಮ್ಮನ ಸೆರಗ ಹೊದ್ದು
ಹೊಲವನ್ನು ಮಗುವಿನಂತೆ ಅಪ್ಪಿ ಹಿಡಿದು
ಭರವಸೆಯ ಮಳೆಗಾಗಿ ಕಾದು
ಪ್ರತಿ ಕ್ಷಣವೂ ಮುಂದೇನು ಎಂಬ
ಭಯದ ಮಳೆ ಹನಿಗಳು
ಆವರಿಸಿದಾಗ ಬೆಚ್ಚಿ ಬೀಳುವವನು
ಅಮ್ಮನ ಭುಜಕ್ಕೆ ಮುಖ ಹುದುಗಿಸಿ ನಿಸೂರಾಗುವವನು

ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತದೆ
ಕಣ್ಣಿಗೆ ಕಾಣದ ಅಪ್ಪನ ಪ್ರೀತಿ ಬದಲಾಗುವುದಿಲ್ಲ
ಮುಂಜಾನೆ ಎದ್ದು ಹೊಲಕ್ಕೆ ಹೋಗುವುದು
ತನ್ನವರ ಖುಷಿಗೆ ಸ್ವಂತ ನೋವನು ಮರೆಯುವುದು
ಇರುವುದರಲ್ಲೇ ಖುಷಿ ಹುಡುಕುವುದು
ಹರಿದ ಕನಸುಗಳಿಗೆ ತೇಪೆ ಹಚ್ಚುವುದು
ಹೀಗೆ ಅವನ ದಿನಚರಿ

ಸೂರ್ಯ ಮೋಡದಲ್ಲಿ ಹುದುಗಿ
ಉದಯಸದೆ ಹೋಗಬಹುದು
ಅಪ್ಪ ಹೆಗಲ ಮೇಲೆ ಹೊತ್ತಿರುವ
ಜವಾಬ್ದಾರಿ ಬಿಟ್ಟು ಕದಲುವವನಲ್ಲ
ಆಕಾಶದಷ್ಟು ವಿಸ್ತಾರವಾದ ದೃಢ ನಂಬಿಕೆಗಳ ಅಪ್ಪ
ಸ್ವಾಭಿಮಾನದ ಜೋಕಾಲಿ ತೂಗಿ
ಸೆಳೆದುಕೊಳ್ಳುವನು ತನ್ನ ತೆಕ್ಕೆಯೊಳಗೆ
ಮಕ್ಕಳು ಮರಿಮಕ್ಕಳನೂ
ಪ್ರೀತಿಯಲ್ಲದೆ ಅಲ್ಲಿ ಬೇರೇನೂ ಇಲ್ಲ

ಇನ್ನೆಷ್ಟು ಹೇಳಲಿ ನಾನು
ಹೇಳಿದಷ್ಟು ಮುಗಿಯುವುದಿಲ್ಲ
ಹೇಳಬಲ್ಲೆ ಅವನು
ಮಳೆ ಗಾಳಿ ಬಿರುಗಾಳಿಗೆ ಎದುರಾಗಿ
ನೆರಳಿನ ಕೊಡೆ ಹಿಡಿದು ನಡೆಸುವ
ನನ್ನ ಅಪ್ಪ ಎಂದು


-ವಿ ನಿಶಾಗೋಪಿನಾಥ್, ಬೆಂಗಳೂರು
*****