ಲಯದ ನಾದ
ಕೆಂಪು ಬಸ್ಸಿನ ವೇಗದಿ
ಕನಸ ಕಾಣುತಿದೆ
ಭಂಡಾಯದ ಹೊಗೆ..
ವಿಚಿತ್ರ ತರ್ಕದ ಕೋಟುಗಳ
ನಡುವೆ ಬಂದಿಯಾಗಿದೆ
ಅಲುಗಾಡುವ ಹಸಿರ ಹುಲ್ಲು…
ಭಾವನೆಯ ಒಡಾಟಕೆ
ಹೊರಾಟವಿಲ್ಲದ ಮೂಕ ಪಕ್ಷಿಗಳು ಬೆಂಚುಗಳಲಿ
ತಲೆಬಾಗಿವೆ….
ಇದಕೆ ಸೋತ ಷರಟುಗಳು
ಮುಗಿಲ ನೋಡುತ
ತಲೆ ಚಚ್ಚಿಕೊಳ್ಳುತಿವೆ…
ಸಾಮಾಜಿಕ ಸ್ವತಂತ್ರ ಬೇಡಿಯಲಿ ಕಪ್ಪು ಕರಗಿ
ಸೆರಗ ಹೃದಯವ ಮಂಥನ
ಮಾಡುತಿದೆ….
ಅಳಿದು ಹೋದ ಕೆರೆ ಕುಂಟೆಗಳಲಿ
ಕೋಮು ಗಲಭೆಯ ಕುಂಟೆ ಬಿಲ್ಲೆ?
ಇದಕೆ ನಕ್ಕು ಹೊರ ನುಗ್ಗಿವೆಯಲ್ಲಾ ಮೋರಿ ನೀರಿನ
ಲಯದ ನಾದ….
ಆದರೂ ಏಟು ಕೊಡುತ್ತಿದೆಯಲ್ಲ ಮುಳ್ಳ ಬೇಲಿ,,ಬಡ ಶ್ರೇಣಿಯ ಬೆನ್ನಿಗೆ?
ಅನ್ಯತಾ ಮನದ ಗಿಡಮರಗಳು ಗಿರಕಿ ಹೊಡೆಯುತಿವೆ….
ಯಾವ ಉಯ್ಯಾಲೆಯಲಿ
ಹುಡುಕೋಣ ಸ್ವಚ್ಚ ಪನ್ನೀರ
ಹನಿಯನು?…
ಗುಹೆಯ ಕತ್ತಲೆಗೆ
ಪಂಜಿನ ಬೆಳಕು ಕಣ್ನೀರಿಡುತಿದೆ.
ನಡೆದು ಬಂದ ಕಪ್ಪು ದಾರಿಯ
ಜೊತೆಗೆ ,ಸಂವತ್ಸರಗಳೆಲ್ಲಾ
ಕಳಚಿದವು..
ಕಂಡ ಕನಸ ಮನಸಿಗೆ
ಮತ್ಸರದ ಬೆಂಕಿ
ಕಿಡಿ ಹಚ್ಚಿ ವ್ಯಂಗ್ಯತೆಯ ಸೂಚಿಸಿದೆ..
ಆದರೂ ಮತ್ತೆ ಮತ್ತೆ ಎಬ್ಬಿಸುತಿದೆಯಲ್ಲ ಬೂದಿಯಲ್ಲಡಗಿದ ಮುದದ
ಬಯಕೆ……
-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ವಿಜಯನಗರ ಜಿಲ್ಲೆ