ಪ್ರತಿಬಾರಿ ಪ್ರತಿರೋಧ….!
ಹೌದು….
ಪ್ರತಿಬಾರಿ ಪ್ರತಿರೋಧ ಒಡ್ಡಿದೇವೆ
ಹಲವು ನೆಪದಲ್ಲಿ ಒಟ್ಟುಗೂಡಿದ್ದೇವೆ
ಒಡೆದು ಹೋಳಾಗಿ ಹೋಗಿದ್ದೇವೆ
ಈ ಬಾರಿಯು ಅದೇ…ಕಾದು ನೋಡುವ…
ದಬ್ಬಾಳಿಕೆಗಳಾದಾಗ
ಅತ್ಯಾಚಾರಗಳಾದಾಗ
ನಮ್ಮ ಹಕ್ಕುಗಳ ಕಸಿದುಕೊಂಡಾಗ
ಆಕ್ರಮಣಗಳಾದಾಗ
ಬಾರಿ ಹೋರಾಟ ಕಟ್ಟಿ ಪ್ರತಿರೋಧ ತೋರಿದ್ದೇವೆ
ನಂತರ ತೆಪ್ಪಗೆ ಮನೆ ಸೇರಿ
ಮರೆತು ಮಲಗಿದ್ದೇವೆ
ಆದರೆ ಈ ಬಾರಿ…ಕಾದು ನೋಡುವ…
ಸ್ವಾರ್ಥಕ್ಕೋ
ಲಾಭಕ್ಕೋ
ಪ್ರತ್ಯೇಕಗೊಂಡು
ಬಣಗಳಾಗಿ ಬೆಳೆಯುತ್ತೆವೆಂಬ
ಹಮ್ಮಿನಲ್ಲೋ ಬಿಮ್ಮಿನಲ್ಲೋ ದೂರಾಗಿದ್ದೇವೆ
ಇಂದು ಹತ್ತಿರವಾಗುವ ಹಠ ತೊಟ್ಟಿದ್ದೇವೆ
ನಾಳೆ ಏನಾಗುತ್ತದೋ…ಕಾದು ನೋಡುವ…
ಆಗಾಗ ಹೀಗೂ ಅನಿಸುತ್ತದೆ
ನಮಗೆ ನಾಯಕರ ಕೊರತೆಯೋ
ಅದು ಇಲ್ಲವೇ ಇಲ್ಲ…
ಆದರೆ ಮುನ್ನಡೆಸುವ
ನಾಯಕರ ಅಗತ್ಯತೆ ಅಂತೂ ಇದೆ
ಅದು ಈ ಬಾರಿಯ ಪ್ರತಿರೋಧದಲ್ಲಿ
ಸಮಷ್ಟಿ ನಾಯಕತ್ವದಲ್ಲಿ ಮುನ್ನಡೆಯುವ
ಪ್ರತಿರೋಧ ಕಾಣುತ್ತದೆಯೋ ಕಾದು ನೋಡುವ…
ಇಲ್ಲಿ ನಂಬಿಕೆ ಇಲ್ಲದೆ
ಹೀಗಾಗಿದೆ ಏನ್ಮಾಡೋದು
ಈ ಬಾರಿಯ ಪ್ರತಿರೋಧವಾದರೂ
ಬಾಬಾ ಸಾಹೇಬರ ಕನಸು ನನಸು ಮಾಡುವ ಕುರಿತು
ಯೋಚಿಸಿ ಒಗ್ಗೂಡುತ್ತದೆಯೋ ಕಾದು ನೋಡುವ…
ಒಗ್ಗೂಡದೆ ಒಬ್ಬರ ಕಾಲ
ಒಬ್ಬರು ಎಳೆದು
ಮತ್ತೊಬ್ಬರ ಜರಿದು
ಬಣಗಳಾಗಿ ಹೀಗೆ ಮುಂದುವರೆದರೆ
ಭವಿಷ್ಯದಲಂತೂ
ನಮ್ಮ ಜನರ ಬದುಕು
ಬೀದಿಗೆ ಬರಲಿದೆ
ಆಗಾಗುವುದು ಬೇಡ
ಜನರಿಂದ ಜನರಿಗಾಗಿಯೇ
ಜನರಿಗೋಸ್ಕರವಾದರೂ
ಈ ಬಾರಿಯ ಪ್ರತಿರೋಧ
ಗಟ್ಟಿಹೆಜ್ಜೆ ಇಡುತ್ತದೆಯೇ ಕಾದುನೋಡುವ….
-ಸಿದ್ದುಜನ್ನೂರ್, ಚಾಮರಾಜ ನಗರ. *****