ಬಳ್ಳಾರಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸುವ ವೀವಿ ಸಂಘದ ಪ್ರಯತ್ನ ಮುಂದುವರೆದಿದೆ -ಸಂಘದ ಅಧ್ಯಕ್ಷ ಎಚ್.ಎಂ. ಗುರುಸಿದ್ದಸ್ವಾಮಿ ಮಾಹಿತಿ

ಬಳ್ಳಾರಿ, ಡಿ. 7: ನಗರದ ವೀರಶೈವ ವಿದ್ಯಾವರ್ಧಕ (ವೀವಿ) ಸಂಘವು ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಯತ್ನದಲ್ಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ. ಗುರುಸಿದ್ದಸ್ವಾಮಿ ಅವರು ತಿಳಿಸಿದರು.


ನಗರದ ಎಸ್.ಜಿ ಜ್ಯೂ ಕಾಲೇಜಿನಲ್ಲಿ ಬುಧವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆಡಿಕಲ್ ಕಾಲೇಜ್ ಆರಂಭಿಸುವುದು ಸಂಘದ ದಶಕಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ತಮ್ಮ ಅವಧಿಯಲ್ಲೂ ತೀವ್ರ ಪ್ರಯತ್ನ ನಡೆದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಂಘದ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧಿ ಮಹಾವಿದ್ಯಾಲಯದ ಬಿ-ಫಾರ್ಮಾಕ್ಕೆ 60 ಸೀಟಿನಿಂದ 100 ಸೀಟಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಜಾರಿ ಮಾಡಿದೆ ಎಂದು ಪ್ರಕಟಿಸಿದರು.
ಆರ್‌ವೈಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಐ (ಆರ್ಟಿಫಿಷಿಯಲ್ ಇಂಟಲಿಜೆನ್ಸಿ) ಇನ್ನಿತರೆ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಎಸ್.ಜಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಕಲಾ / ವಾಣಿಜ್ಯ / ವಿಜ್ಞಾನ ವಿಭಾಗಗಳು ಇದ್ದು, ಪ್ರಥಮ ಪಿಯುಸಿಯಲ್ಲಿ ೪೩೭, ದ್ವಿತೀಯ ಪಿಯುಸಿಯಲ್ಲಿ ೩೭೫ ಒಟ್ಟು ೮೧೨ ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಶೆಟ್ರ ಗುರುಶಾಂತಪ್ಪ ಪ್ರೌಢಶಾಲೆಯಲ್ಲಿ ೧೯೪೮ ರಿಂದ ೨೦೨೨ರ ವರೆಗೆ ೧೬,೧೩೨ ವಿದ್ಯಾರ್ಥಿಗಳು ಹಾಗೂ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ೧೯೬೬ ರಿಂದ ೨೦೨೨ರ ವರೆಗೆ ೧೯,೨೩೪ ವಿದ್ಯಾರ್ಥಿಗಳು ಒಟ್ಟಾರೆ ೩೫,೪೫೬ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ೭೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ವಿವರಿಸಿದರು.
ಈ ಶಾಲಾ-ಕಾಲೇಜಿನ ಹಳೇ ವಿದ್ಯಾರ್ಥಿ ಬಿ. ಶ್ರೀರಾಮುಲು, ಅವರು ಪ್ರಸ್ತುತ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಗಳ ಜವಾಬ್ದಾರಿ ಜತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಹೆಮ್ಮೆಯ ವಿಷಯ. ಅದೇ ರೀತಿ ನೂರಾರು ಹಳೇ ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನದಲ್ಲಿದ್ದು ತಮ್ಮ ಸೇವೆಯನ್ನು ಸಲ್ಲಿಸುತ್ತಿರುವವರು ಹಾಗೂ ಹಲವರು ನಿವೃತ್ತ ಹೊಂದಿದ್ದಾರೆ ಎಂದು‌ ಮಾಹಿತಿ ನೀಡಿದರು.
ಸುದ್ದಿ ಗೋಷ್ಟಿಯಲ್ಲಿ ವೀವಿ ಸಂಘದ ಕಾರ್ಯದರ್ಶಿ ಬಿ ವಿ ಬಸವರಾಜ್, ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಎಸ್.ಜಿ( ಶೆಟ್ರ ಗುರುಶಾಂತಪ್ಪ) ಸಂಯುಕ್ತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಎಂ. ಕಾತ್ಯಾಯಿನಿ ಮರಿದೇವಯ್ಯ, ಸದಸ್ಯರಾದ  ಎ. ಚಂದ್ರಾರೆಡ್ಡಿ, ಕೆ.ಎಂ. ಭೋಗೇಶ್, ಪಿ.ಎಸ್. ಜಗನ್ನಾಥಗೌಡ, ಎಚ್.ಎಂ.ವೀರಭದ್ರಯ್ಯ, ಜಿ. ದಿವಾಕರ್, ಜೆ. ಮಂಜುನಾಥ್, ಎಚ್.ಎಂ. ಮಹೇಂದ್ರ ಕುಮಾರ್, ಐ.ಎಂ.,ಮಹೇಶ್ವರಯ್ಯ, ಕಾಲೇಜಿನ ಪ್ರಾಂಶುಪಾಲ ಶರಣಬಸವರಾಜ, ಉಪ ಪ್ರಾಂಶುಪಾಲ ಬಿ. ಮರಿಯಪ್ಪ ಮತ್ತು ಬೋಧಕವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****