ಅನುದಿನ ಕವನ-೭೦೮, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕವನದ ಶೀರ್ಷಿಕೆ:ಒಲವೇ ನಮ್ಮ ಬದುಕು

ಒಲವೇ ನಮ್ಮ ಬದುಕು

ಬದುಕಿನ ಜಾತ್ರೆಯೊಳಗ
ಸಂಸಾರ ತೇರನು ಏರಿ
ಬಲುದೂರ ಬಂದೇವ
ಕೈಚೆಲ್ಲಿ ಕೂರುವದ್ಯಾಕ..?
ನಗು ನಗುತ ಹೆಜ್ಜಿ ಹಾಕ!

ಕಣ್ಣಾಗ ಕಣ್ಣೀರ ಹೊಳಿಯಾಕ,
ದನಿಯಾಗ ಬ್ಯಾಸರದ ಸುಳಿವ್ಯಾಕ,
ಒಳಗೊಳಗ ಹೆದರಿಕೆಯಾಕ…?
ಕಷ್ಟಗಳು ಎಲ್ಲರಿಗೂ ಬರಾಕ ಬೇಕ
ಹೆದರದ ದೇವರ ಮ್ಯಾಲ ಭಾರ ಹಾಕ!

ಮೊಗದಾಗ ಚಿಂತೆಯಾಕ,
ನೋಟದಾಗ ದಿಗಿಲ್ಯಾಕ..?
ಬಂದೇ ಬರತೈತಿ ಗೆಳತಿ…..
ಬದುಕಿನ್ಯಾಗ ಸುಖ
ಆದರ…ಕೊಂಚ ಕಾಯಬೇಕ!

ಸಾವಿನ ಮಾತ್ಯಾಕ,
ಸೋಲಿನ ಭಯವ್ಯಾಕ?
ಗೆಲ್ಲಾಕ ಛಲ ಬೇಕ
ಛಲದೊಳಗ ಒಳಿತಿರಬೇಕ
ಗೆದ್ದ ಗೆಲುವಿಗೆ ಜಗ ಮೆಚ್ಚಬೇಕ!

ದೈವಕ್ಕ ಶರಣಾಗಬೇಕ
ನೋವಿಗೆ ಕರಗಬೇಕ
ನಲಿವಿಗೆ ಹರುಷಪಡಬೇಕ
ಹಂಚುತ ಸಾಗಿದರ ಪ್ರೀತಿಬೆಳಕ
ಒಲವೇ ನಮ್ಮ ಬದುಕ!


-ನಾಗೇಶ್ ಜೆ. ನಾಯಕ, ಸವದತ್ತಿ
*****