ಅನುದಿನ ಕವನ-೭೧೦, ಕವಿ: -ಎ.ಎನ್.ರಮೇಶ್.ಗುಬ್ಬಿ, ಕವನದ ಶೀರ್ಷಿಕೆ: ಬದುಕು ಬೆಳಕು

“ಇಲ್ಲಿ ನಾನೆಂದರೆ ನಾನಲ್ಲ. ಇದು ಸಾಧಕರ ಕವಿತೆ. ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟುಕೊಂಡು ಜನಿಸಿದ ಬಂಗಾರದ ಕುಸುಮಗಳ ಗೀತೆಯಲ್ಲವಿದು. ಕಷ್ಟಗಳ ಕಡುಬೆಂಕಿಯಲಿ ಅರಳಿದ ಹೂಗಳ ವ್ಯಥೆ ಯಶೋಗಾಥೆಗಳ ಭಾವಗೀತೆ. ಹೆಣ್ಣಿರಬಹುದು, ಗಂಡಿರಬಹುದು ಇಂತಹ ಜೀವಗಳೇ ಬುವಿಯ ಬದುಕುಗಳಿಗೆ ಸ್ಫೂರ್ತಿ. ಬದುಕಿನ ಬೆಳ್ಕಿಗೆ ದೀಪ್ತಿ. ಏನಂತೀರಾ..?”                                                       – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.👇

ಬದುಕು ಬೆಳಕು.!

ಸ್ಫುರಿವ ಬೆಳದಿಂಗಳ ತಂಪಿನಲಿ
ನಳನಳಿಸುತ ಮೆಲ್ಲ ಬಿರಿದ
ನಂದನವನದ ಕುಸುಮವಲ್ಲ.!
ಕಡು ಬಿಸಿಲ ಬೆಂಕಿಯಲಿ
ಹೊರಳುತ ನರಳಿ ಅರಳಿದ
ಬೀದಿಬದಿಯ ಬೇಲಿಹೂವು ನಾ.!

ದೈವಾನುಗ್ರಹ ಚಿಲುಮೆಯಲಿ
ಮುದದಿ ಮಿಂದು ಮೈದಳೆದ
ಮಿನುಗುವ ಕೌಸ್ತುಭ ಮಣಿಯಲ್ಲ
ಕಷ್ಟ ಕೋಟಲೆ ಕುಲುಮೆಯಲಿ
ನೊಂದು ಬೆಂದು ನರಳಿದ
ಹೊಳೆವ ಪುಟಕಿಟ್ಟ ಬಂಗಾರ ನಾ.!

ಅನಾಯಾಸ ಗೆಲುವಿನಾಸರೆಯಲಿ
ಸಂಘರ್ಷ ಸವಾಲುಗಳಿಲ್ಲದೆ
ಮೇರುಗಿರಿಯೇರಿದ ತಾರೆಯಲ್ಲ
ಸತತ ಸೋಲುಗಳ ಗರ ಸೆರೆಯಲಿ
ವೈಫಲ್ಯ ಅವಮಾನ ನೋವುಂಡು
ಯಶೋಶೃಂಗವೇರಿದ ನೀರೆ ನಾ.!

ಅಸಾದೃಶ ಪವಾಡ ಮಹಿಮೆಯಲಿ
ಶೂನ್ಯದಿಂದ ತಟ್ಟನೆ ಅವತರಿಸಿದ
ಅಪೂರ್ವ ಕನಕ ಮೂರ್ತಿಯಲ್ಲ
ಅನಂತ ಉಳಿಪೆಟ್ಟುಗಳ ದಾಳಿಯಲಿ
ನಿತ್ಯ ನಿರಂತರ ಹೊಡೆತಗಳುಂಡು
ಶಿಲೆಯಿಂದ ಶಿಲ್ಪವಾದ ಪುತ್ಥಳಿ ನಾ.!

ಅಳುವಿನ ಆಳ ನೋಡಿರುವೆ ಹಾಗಾಗಿ
ನಗಬಲ್ಲೆ ಈಗ ನೆಮ್ಮದಿ ನಿರಾಳವಾಗಿ
ಏಳು-ಬೀಳುಗಳ ಅರಿತಿರುವೆ ಹಾಗಾಗಿ
ಎದೆಗುಂದದೆ ನಿಲ್ಲಬಲ್ಲೆ ನಿರ್ಭಯವಾಗಿ
ಗೆಳತಿ ಬಾಳ ಮರ್ಮ ಧರ್ಮವೇ ಹೀಗೆ
ಕರ್ಮಗಳಿಗೆ ಕುಸಿಯದೆ ನಡೆದರಷ್ಟೆ ನಗೆ.!

-ಎ.ಎನ್.ರಮೇಶ್.ಗುಬ್ಬಿ

*****