ಅನುದಿನ‌ ಕವನ-೭೧೨, ಕವಯಿತ್ರಿ: ಕೆ. ಪಿ. ಮಹಾದೇವಿ. ಅರಸೀಕೆರೆ, ಕವನದ ಶೀರ್ಷಿಕೆ: ಅವಳೆಂದೂ ಕವಿತೆ ಬರೆಯಲಿಲ್ಲ

ಅವಳೆಂದೂ ಕವಿತೆ ಬರೆಯಲಿಲ್ಲ

ಅವಳೆಂದೂ ಕವಿತೆ ಬರೆಯಲಿಲ್ಲ
ಪದಗಳಿಗಾಗಿ ಅಕ್ಷರಗಳ ಹಿಂದೆ
ಜೋತು ಬೀಳಲಿಲ್ಲ.

ದುಃಖ ಉಮ್ಮಳಿಸಿದಾಗೆಲ್ಲಾ
ಏರುದಿಬ್ಬದ ಗಿಡಗಳಿಗಾಗಿ
ಜೋಡಿ ಕೊಡಗಳ ಹೊತ್ತಳು
ಎದೆಯ ಭಾರ ಇಳಿವವರೆಗೂ
ಕಷ್ಟಗಳಿಗೆ ಶರಣು ಮಾಡಿ
ಸುಖದ ಹೆಸರ ಹೇಳಿ ನೆಟ್ಟ
ಸಾಲು ಸಾಲು ಗಿಡಗಳಿಗೆ
ಪಾತಿ ಕಟ್ಟಿ ನೀರ ತುಂಬಿದಳು
ದಿಬ್ಬದ ತುಂಬೆಲ್ಲಾ ಹಸಿರೆದ್ದು
ಇಳೆ ಬಾನು ಹಬ್ಬವ ಮಾಡಿ
ಮಳೆಯಂತೆ ಕವಿತೆಗಳು
ಹರಿದು ತೊರೆಯಾಗುವಾಗ

ಅವಳೆಂದೂ ಕವಿತೆ ಬರೆಯಲಿಲ್ಲ.
ಸಮಯಕ್ಕಾಗಿ ತಡಕಾಡಲಿಲ್ಲ.

ಭಾವಗಳು ಮೊರೆಮೊರೆದು
ಎದೆಕುಲುಮೆ ಧಗಧಗಿಸಿದಾಗೆಲ್ಲಾ
ಕಮ್ಮತಕೆ ಕುಳ ಕುಡಗೋಲುಗಳ
ಹದವಾಗಿ ಹಣಿದಿಟ್ಟುಕೊಂಡಳು
ಗೊಂದಲಗಳು ಮನಮುತ್ತಿದಾಗೆಲ್ಲಾ
ದೊಗರೆದ್ದ ಮನೆಯ ಗೋಡೆ ನೆಲಗಳನೆಲ್ಲಾ
ನೊರೆದು ನಯವಾಗಿಸಿದಳು
ತೇಪೆ ಕಾಣದಂತೆ ಬಿಡಿಸಿದ
ಕಣ್ಣಿಗೊಪ್ಪಾಗುವ ಬಣ್ಣ ಬಣ್ಣದ
ನಾಜೂಕು ಚಿತ್ತಾರಗಳ ಕವಿತೆಗಳು
ಅನುದಿನದ ಸಂಸಾರದ ತೇರೆಳೆದು
ಬಾಳ ಜಾತ್ರೆಯ ನಡೆಸಿದರೂ

ಅವಳೆಂದೂ ಕವಿತೆ ಬರೆಯಲಿಲ್ಲ
ಬರಿದೆ ಅಕ್ಷರಗಳ ಜೋಡಿಸಲಿಲ್ಲ.

ಕ್ರೌರ್ಯದ ಕತ್ತಿಗಳು ಮಸೆದಾಡಿ
ಘಾತುಕದ ಕರಿನೆರಳು
ಕೇರಿ ಓಣಿಯಲೆಲ್ಲಾ ಹರಿದಾಡಿ
ಸೂತಕದ ಛಾಯೆ ತುಂಬಿರುವಾಗ
ಧೂಪ ಹಾಕುವಳು ದೀಪ ಹಚ್ಚುವಳು
ಹಸಿದ ಮಕ್ಕಳಿಗಾಗಿ ರೊಟ್ಟಿ ಮಾಡುವಳು
ಬಿದ್ದೆದ್ದ ಜೀವಗಳ ಗಾಯಕ್ಕೆ
ಮಮತೆಯ ಮದ್ದು ಅರೆದಚ್ಚುವಾಗ
ಈ ನೆಲದ ನಿಜವು ಅವಳೆದೆಯ
ಹಾಡಾಗಿ ನೋವ ಮರೆಸುವಾಗ
ಕೋಟಿ ಕವಿತೆಗಳು, ಈ ಜಗದ
ಮಕ್ಕಳಿಗೆ ದಾರಿ ದಿಕ್ಕಾಗುವವು

ಅವಳೆಂದೂ ಕವಿತೆ ಬರೆಯಲಿಲ್ಲ
‘ತಾಯಿ’ ನನ್ನವ್ವ ಅವಳೆಂದೂ
ಕವಿತೆ ಬರೆಯಲಿಲ್ಲ.

-ಕೆ. ಪಿ. ಮಹಾದೇವಿ.
ಅರಸೀಕೆರೆ
*****