ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು -ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಸಿ.ಮಂಜುನಾಥ

ಬಳ್ಳಾರಿ, ಡಿ.15: ಬಳ್ಳಾರಿ ಜಿಲ್ಲೆ ಬಯಲಾಟದ ತವರೂರು ಎಂದು ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ ತಿಳಿಸಿದರು.
ವಿಠಲಾಪುರ ಶ್ರೀ ಹಂಪಿ ವಿರೂಪಾಕ್ಷ ಬಯಲಾಟ, ನಾಟಕ ಪ್ರೋತ್ಸಾಹ ಟ್ರಸ್ಟ್‌ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ
ರಾಜ್ಯಮಟ್ಟದ ಬಯಲಾಟ(ದೊಡ್ಡಾಟ)ದ ಪರಿಷ್ಕರಣದ ಚರ್ಚಾ ಗೋಷ್ಠಿ, ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಕುಡುತಿನಿ ಗ್ರಾಮದ ಭೀಮೇಶ ಕಾವ್ಯನಾಮದ ನರಸಿಂಗರಾಯರು ಮೊದಲ ಬಯಲಾಟವನ್ನು ರಚಿಸಿದ್ದಾರೆ ಎಂಬುದು ಸಂಶೋಧಕರು ದೃಡಪಡಿಸಿದ್ದಾರೆ ಎಂದು ಹೇಳಿದರು.
ಅವಿಭಜಿತ ಬಳ್ಳಾರಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಬಯಲಾಟದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಬಯಲಾಟಗಳು ಯಕ್ಷಗಾನದಂತೆ ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಲು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪರಿಷ್ಕರಣೆಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಅಕ್ಷರ ಕಲಿಯದವರೇ ಬಯಲಾಟವನ್ನು
ಸಂರಕ್ಷಿಸಿ, ಬೆಳೆಸುತ್ತಿರುವ ಈ ಕಲೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಬಳ್ಳಾರಿಯ ಪತ್ರಕರ್ತರು ನಾಲ್ಕು ವರ್ಷಗಳ ಹಿಂದೆ ಬಯಲಾಟವನ್ನು ಆಡುವ ಮೂಲಕ ಈ‌ ಕಲೆಯತ್ತ ವಿದ್ಯಾವಂತ ಯುವಜನರು ಬರುವಂತೆ ಉತ್ತೇಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಬಯಲಾಟ ಪರಿಷ್ಕರಣದ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ, ರಂಗಕರ್ಮಿ ಎ.ಎಂ.ಪಿ ವೀರೇಶಸ್ವಾಮಿ ಅವರು ಹಳ್ಳಿಗಳಲ್ಲಿ ಜೀವಂತವಾಗಿರುವ ಬಯಲಾಟವನ್ನು ನಗರದ ಜನತೆಗೆ, ಯುವ ಸಮೂಹಕ್ಕೆ ಇಷ್ಟವಾಗುವಂತೆ ಪರಿಷ್ಕರಿಸುವುದು ಸವಾಲಿನ‌ ಕೆಲಸ. ಈ‌ ನಿಟ್ಟಿನಲ್ಲಿ ಬಯಲಾಟ ಕ್ಷೇತ್ರದ ವಿದ್ವಾಂಸರು, ನಾಟಕಕಾರರು ಮೂಲ ಸ್ವರೂಪವನ್ನು ಉಳಿಸಿ ಕೊಂಡು ಕಾಲ ಮಿತಿ ಎರಡು ಅಥವಾ ಮೂರು ಗಂಟೆಗಳ ಒಳಗಡೆ ಇರುವಂತೆ ಪರಿಷ್ಕರಿಸಬೇಕು.
ಕಥಾ ಹಂದರ ಸಂಕ್ಷಿಪ್ತವಾಗಿರ ಬೇಕು, ವೇದಿಕೆಯ ಶಿಸ್ತು ಪಾಲನೆಯಾಗಬೇಕು ಎಂದರು.
ಸರಕಾರ ನಾಟಕ ತರಬೇತಿ ಸಂಸ್ಥೆಗಳಿರುವಂತೆ ಬಯಲಾಟ ತರಬೇತಿ ಸಂಸ್ಥೆ ರೆಪರ್ಟರಿ ಸ್ಥಾಪಿಸಬೇಕು. ಬಯಲಾಟ ಗಳಿಗೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಬಯಲಾಟದ ಕೃತಿಗಳು ಮುದ್ರಣಗೊಳ್ಳಬೇಕು
ಶಾಲಾ ಕಾಲೇಜುಗಳಲ್ಲಿ ಹೆಚ್ಚೆಚ್ಚು ಬಯಲಾಟಗಗಳ ಪ್ರದರ್ಶನ ವಾಗಬೇಕು ಎಂದು ತಿಳಿಸಿದರು.


ಸಾಹಿತಿ, ದೊಡ್ಡಾಟ ಭಾಗವತ ಮತ್ತಿಹಳ್ಳಿಯ ಬಿ.ಪಂಪಾಚಾರಿ, ಉತ್ತರ ಕರ್ನಾಟಕದ ಗಂಡು ಮೆಟ್ಟಿದಕಲೆಯಾದ
ಬಯಲಾಟ(ದೊಡ್ಡಾಟ) ಮನುಷ್ಯರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಲೆ ಬೆಳೆಯಬೇಕಾದರೆ ಜನರ ಪ್ರೋತ್ಸಾಹ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಲ್ಲು ಗ್ರಾಪಂ ಅಧ್ಯಕ್ಷ ಪಾಲಾಕ್ಷಗೌಡ, ಗ್ರಾಪಂ‌ ಸದಸ್ಯ ಹೆಚ್.‌ಮರಿಹುಲುಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಉಮಾಶಂಕರ್, ಗ್ರಾಮದ ಬಸವನಗೌಡ, ಯಲ್ಲಪ್ಪ, ತಿಮ್ಮಾರೆಡ್ಡಿ, ಬಯಲಾಟ ಮಾಸ್ತರ ಹನುಮವಧೂತ, ಮತ್ತಿತರರು ಉಪಸ್ಥಿತರಿದ್ದರು.


ಸನ್ಮಾನ: ಬಯಲಾಟ ಹಿರಿಯ ಕಲಾವಿದೆ ಎಳ್ಳಾರ್ತಿ ಚಾಮುಂಡೇಶ್ವರಿ ಹಾಗೂ ಹಿರಿಯ ಬಯಲಾಟ ಕಲಾವಿದ ಬೊಮ್ಮನಾಳ್‌ ಬಸವನಗೌಡ, ಸಿ.ಮಂಜುನಾಥ, ಎ.ಎಂ.ಪಿ ವೀರೇಶ ಸ್ವಾಮಿ, ಬಿ.ಪಂಪಾಚಾರಿ ಮತ್ತಿತರ ಸಾಧಕರನ್ನು ಟ್ರಸ್ಟ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರದರ್ಶನ; ಬಿ.ಗಾಳಿ ಮಲ್ಲಯ್ಯ ರಚನೆಯ ಶ್ರೀ ರೇಣುಕಾದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ಗೊಂಡಿತು.


ಧರ್ಮಪ್ಪ ಜಾನೇಕುಂಟೆ ಮತ್ತು ಕಲಾತಂಡದವರಿಂದ ಜಾನಪದ, ವಚನಗಾಯನ, ರಂಗಗೀತೆಗಳು, ದಮ್ಮೂರು ಕರಿಯಪ್ಪ ಮತ್ತು ಕಲಾ ತಂಡದಿಂದ ಬಯಲಾಟ ಪ್ರಾತ್ಯಕ್ಷಿಕೆ ಜರುಗಿದವು.
ಸಂಗೀತ: ಬೆಳಗಲ್ಲು ಗ್ರಾಪಂ ಸದಸ್ಯ, ಧರ್ಮಪ್ಪ ಜಾನೆಕುಂಟೆ ಹಾರ್ಮೋನಿಯಂ, ಬಳ್ಳಾರಿ ಶ್ರೀನಿವಾಸ ಮದ್ದಲಿ, ದಾವಣಗೆರೆ ವೆಂಕಟೇಶ ಪ್ಯಾಡ್ ನುಡಿಸಿದರು.
ಟ್ರಸ್ಟ್ ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ವಿಠ್ಲಾಪುರ ಜಿ.ಕೆ ತಿಪ್ಪೇಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕರ್ನಾಟಕ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಮುದ್ದಟನೂರು ತಿಪ್ಪೇಸ್ವಾಮಿ ನಿರೂಪಿಸಿ ವಂದಿಸಿದರು.
*****