ಬಳ್ಳಾರಿ, ಡಿ.16: ಗಂಡುಮೆಟ್ಟಿನ ಕಲೆಯಾದ ಬಯಲಾಟವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಜಿ.ಪಂ ಮಾಜಿ ಸದಸ್ಯ ಗೋನಾಳ್ ವಿರುಪಾಕ್ಷಗೌಡ ಅವರು ಹೇಳಿದರು.
ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗಿರಿಜನ ಉಪ ಯೋಜನೆ ಅಡಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಯಲಾಟವನ್ನು ಗ್ರಾಮೀಣ ಪ್ರದೇಶದಲ್ಲಿ ಅಪಾರವಾಗಿ ಪ್ರೀತಿಸುತ್ತಾರೆ. ಬಯಲಾಟದ ಜತೆ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಸರಕಾರ ಕಲೆಯನ್ನು ಉಳಿಸುವ ಜೊತೆಗೆ ಕಲಾವಿದರ ಸಂಕಷ್ಟಗಳಿಗೂ ಸ್ಪಂದಿಸಬೇಕು. ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಬಣ್ಣದ ಬದುಕಿನ ನೋಡಲು ಚಂದ. ಅದರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಬಹಳಷ್ಟು ಕಲಾವಿದರ ಬದುಕು ಇಂದು ಬೀದಿ ಪಾಲಾಗಿದೆ. ಅಂತವರನ್ನು ಗುರುತಿಸುವ ಕಾರ್ಯಕ್ಕೆ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಯಲಾಟ ಸಂಘ ಸಂಸ್ಥೆಗಳು ಅಸ್ತಿತ್ವಕ್ಕೆ ಬರುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ರಮೇಶ್ ಗೌಡ ಪಾಟೀಲ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ, ಚಟುವಟಿಕೆಗಳಿಗೆ ಸರಕಾರ ಅನುದಾನ ನೀಡುವುದೇನೋ ಸರಿ ಆದರೆ ಇಲ್ಲದ ನಿಯಮಗಳನ್ನು ಹೇರುವುದು ಸರಿಯಲ್ಲ. ಕಾರ್ಯಕ್ರಮದ ಫೋಟೋ, ವರದಿ ಸಾಕು. ವಿಡಿಯೋ ಚಿತ್ರೀಕರಣದ ದಾಖಲೆ ಕೇಳುವುದು ಬೇಡ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ್ ಮಾತನಾಡಿ, ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರು ತಮ್ಮ 74ರ ಇಳಿ ವಯಸ್ಸಿನಲ್ಲೂ ಬಯಲಾಟ ಉಳಿಸಿ ಬೆಳೆಸಲು ಟ್ರಸ್ಟ್ ರಚಿಸಿ ಶ್ರಮಿಸುತ್ತಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.
ಒಂಬತ್ತು ವರ್ಷದಲ್ಲೇ ಬಾಲ ಕಲಾವಿದೆಯಾಗಿ ರಂಗ ಪ್ರವೇಶಿಸಿದ ಸುಜಾತಮ್ಮ ಅವರನ್ನು ತೆಲುಗು ಚಿತ್ರರಂಗ ಕೈಬೀಸಿ ಕರೆದರೂ ಬಯಲಾಟದ ಮೇಲಿನ ಪ್ರೀತಿ ಅಲ್ಲಿಗೆ ಹೋಗೋಡಲಿಲ್ಲ ಎಂದರು.
ಅಪ್ರತಿಮ ಕಲಾವಿದರಾದ ಇವರಿಗೆ ಬರುವ ವರ್ಷ ಶ್ರೀವಾಲ್ಮೀಕಿ ಪ್ರಶಸ್ತಿಯನ್ನು ಸರಕಾರ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಕರ್ನಾಟಕ ಜಾನಪದ ಪರಿಷತ್ ಕುರುಗೋಡು ತಾಲೂಕು ಘಟಕದ ಅಧ್ಯಕ್ಷ ಚಾನಾಳ್ ಅಮರೇಶ್ ಮಾತನಾಡಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಶ್ರೀ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ, ಹಿರಿಯ ಬಯಲಾಟ ಕಲಾವಿದೆ ಉಷಾರಾಣಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್. ಪಾಂಡುರಂಗಪ್ಪ ಮತ್ತು ಹಿರಿಯ ರಂಗ ಕಲಾವಿದ ರಮೆಶಗೌಡ ಪಾಟೀಲ್ ಆವರನ್ನು ಟ್ರಸ್ಟ್ ಪರವಾಗಿ ಸನ್ರಮಾನಿಸಿ ಗೌರವಿಸಲಾಯಿತು.
ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಅಧ್ಯಕ್ಷೆ ಸುಜಾತಮ್ಮ, ಬಯಲಾಟ ಮಾಸ್ತರುಗಳಾದ ವೈ.ರಂಗಾರೆಡ್ಡಿ, ಹನುಮಾವಧೂತ, ಎರಗುಡಿ ಮುಖಂಡ ಎ.ಗೋಪಾಲ್, ಜಿ. ಮುದ್ದಪ್ಪ, ಹೆಚ್. ಚಂದ್ರಶೇಖರ,ಕಥಾ ಸಂಚಾಲಕ ಜಿ. ಭೀಮಪ್ಪ, ಹರ‍್ಮೋನಿಯಂ ವಾದಕರಾದ ಎರಗುಡಿ ಪಾಮಣ್ಣ, ಜಿ. ಷಣ್ಮುಖಪ್ಪ, ಎರಗುಡಿ ಗ್ರಾ.ಪಂ ಅಧ್ಯಕ್ಷ ಈರಣ್ಣ, ಸದಸ್ಯ ಎನ್.ಗಾದಿಲಿಂಗಪ್ಪ, ಯುವ ಮುಖಂಡ ಗೋನಾಳ್ ನಾಗಭೂಷಣಗೌಡ, ಟ್ರಸ್ಟ್ನ ರ‍್ರಮ್ಮ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ. ವೀಣಾಕುಮಾರಿ, ಕುಸುಮಾ ತಂಡದವರಿಂದ ರಂಗಗೀತೆಗಳ ಗಾಯನ ನಡೆಯಿತು. ಉಷಾರಾಣಿ ಮತ್ತು ಸುಜಾತಮ್ಮ ಅವರು ಬಯಲಾಟ ಪದಗಳನ್ನು ಹಾಡಿ ರಂಜಿಸಿದರು.
ಸಿರಿಗೆರೆ ಸಿದ್ರಾಮಪ್ಪ ಮತ್ತು ರಮೇಶಗೌಡ ಪಾಟೀಲ್ ಅವರು ಕ್ರಮವಾಗಿ ಅಭಿಮನ್ಯು ಮತ್ತು ದುರ್ಯೋಧನ ಪಾತ್ರದ ಬಯಲಾಟ ಸಂಭಾಷಣೆ ಹೇಳಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.
ಚಿನ್ನಕ್ಷೀರವಿಂದೇಶ್ವರಿ ಮತ್ತು ಬಿ. ಸುರೇಶ್ ಕುಮಾರ್ ತಂಡದವರಿಂದ ಸಮೂಹ ನೃತ ಪ್ರದರ್ಶನ ನಡೆಯಿತು. ವಾಲ್ಮೀಕಿ ದೊಡ್ಡ ಚಿಕ್ಕಣ್ಣ ತಲಮಾಮಿಡಿ ಕಲಾ ತಂಡದವರಿಂದ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.
ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಕಾರ್ಯದರ್ಶಿ ಬಿ. ಲಕ್ಷೀನಾರಾಯಣ ಸ್ವಾಗತಿಸಿದರು. ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಕಾರ್ಯಕ್ರಮ ನಿರೂಪಿಸಿದರು. ಕಲಾ ಟ್ರಸ್ಟ್ ಖಜಾಂಚಿ ಬಿ.ಸುರೇಶ್ ಕುಮಾರ್ ವಂದಿಸಿದರು.
******