ಗರಡಿಯ ಜರಡಿ
ಜಾರಿ ಬೀಳುತಿದೆ ದುಪ್ಪನೆ
ಧರ್ಮ ಸಂಕಟದ ಉಸುಗು,
ಇದಕೆ ಕೈ ತಟ್ಟಿ ಕೆರಳಿವೆ
ಬೊಟ್ಟು ಭಂಡಾರ….
ಪಾರಂಪರಿಕ ಸ್ಥಿತಿಯ
ವ್ಯಂಗ್ಯದ ಕತ್ತಲು
ಹಾಸ್ಸ್ಯಗೈಯ್ಯುತಿದೆ….
ಗರಡಿಯಲಿ ಧರ್ಮದ ಜರಡಿ
ಮನೋವ್ಯಾಕುಲದ ಮನವ
ಹಿಸುಕುತಿದೆ…..
ಕಪ್ಪು ಮಸಿಯು ನಗುತಿದೆ
ನನ್ನ ನೆತ್ತರು ಎಲ್ಲೆಡೆ ಪ್ರಸರಿಸಿದೆ
ಎಂದು…..
ಗಲಭೆಯ ವ್ಯಭಿಚಾರಕೆ
ಬಟ್ಟೆಯ ಸಂಕ್ರಮಣ?
ಪಟ ಏರಿ ಹಾರುತಿದೆ,
ಆಗಸದ ಮುಸುಕ ಒರೆಸಲು?
ಇದಕೆ ಋತುವಿನ ಏರು ಪೇರು..
ವಿಮರ್ಶೆಯ ದ್ವಂಸಕೆ
ಹೆಸರಿಲ್ಲದ ಅಖಂಡ ವ್ಯಾಖ್ಯಾನ?
ಬಯಲ ಜಾತಿಯ ಮುಣುಗಿಸಿದೆ….
ತಟಸ್ಥವಾಗಿದ್ದ ಕುಲ ಮತವಿಲ್ಲದ
ಗರಡಿಯ ಮಣ್ಣು, ರಾಜಕೀಯದಿ ಬಿದ್ದು
ಭಾಂದವ್ಯವ ಕಳಚುತಿದೆ..
ನೊಸಲ ವಿಭೂತಿ ನಾಮಗಳು
ಜಪ ತಪ ಗೈಯ್ಯದೆ
ಆಕಾಶವಾಣಿಯ ವಿಹಂಗದಿ
ಸುಯ್ ಎಂದು ಸುಳಿಯುತಿವೆ..
ಇದಕೆಲ್ಲ ಯಾವ ವೈಭೋಗದ
ಅಭಿಷೇಕ?
ಹುನ್ನಾರದ ಪುರಸ್ಕಾರದಿ
ಹೂವಿನ ಎಸಳು ತಲೆಬಾಗಿದೆ..
ಸೃಷ್ಟಿಯ ಬೆವರ ಬಿಂದು
ಹಿಂಸೆಯ ಹಳ್ಳವಾಯಿತೆ?
ಇದಕೆ ಚರಿತ್ರೆಯ ಚಾಣಿಕ್ಯನ
ತಂತ್ರವು ಶೋಕಗೈಯ್ಯುತಿದೆ
ಹೊಂದಾಣಿಕೆಯ ಭರತ ಖಂಡ
ಸೃಷ್ಟಿಯಾಗಲೆಂದು………
-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ *****