ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ….?
ಯಾರಿಗೆ ಗೊತ್ತು
ನಾವಿಬ್ಬರು ಇಂದು
ಭೇಟಿಯಾದರೂ ಆಗಬಹುದು
ಈ ಹಾಳು ಮಧ್ಯಾಹ್ನಗಳೆಲ್ಲ ಕರಗಿ
ಹತ್ತಿಯಷ್ಟು ಹಗುರಾಗಿ
ಬೂರುಗದ ಹೂಗಳಂತೆ
ನಮ್ಮಿಬ್ಬರ ಮಧ್ಯೆ ಹಾರಾಡಬಹುದು
ಇಪ್ಪತ್ತು ವರ್ಷ-
ನಾ ನಿನ್ನ ನೋಡದೇ..
ಗಂವ್ ಎನ್ನುವ ಕೆಲವು ಕಡುಕಪ್ಪು
ರಾತ್ರಿಗಳಲ್ಲಿ ಕನಸಿಗೆ ಬಂದದ್ದು ಬಿಟ್ಟರೆ
ಈ ಕೆಲಸದ ಮಧ್ಯೆ ನೀನು
ಮಸುಕು ಮಸುಕು
ಹುರಿಗೊಳಿಸಿದ ಬಿಲ್ಲಿನಂತಿದ್ದ ನಿನ್ನ ಬೆನ್ನೀಗ
ಕೊಂಚವಾದರೂ ಬಾಗಿರಬಹುದು
ತಲೆ ಸ್ವಲ್ಪ ಬೋಳಾಗಿರಬಹುದು
ಚಾಳೀಸು ಬಂದ ಕಣ್ಣ ಕೆಳಗಿನ ಕುಡಿಮೀಸೆ
ಕಪ್ಪು ಬಿಳುಪಿನ ಚಿತ್ರವಾಗಿರಬಹುದು
ತೀವೃ ನಿಗಾ ಘಟಕದಲ್ಲಿ ಮಲಗಿ ಬಂದಾಗಿಂದ
ನನಗೂ ಕೊಂಚ ಮಂಡಿನೋವು
‘ತೂಕ ಕಡಿಮೆ ಮಾಡಿಕೊಳ್ಳಿ’
ಎಂದಾಗಲೆಲ್ಲ ವೈದ್ಯರು ನಿನ್ನ ನೆನಪಾಗಿ
ಎರಡು ದಿನ ಸೌತೆಕಾಯಿ ತಿಂದು
ಊಟ ಬಿಡುತ್ತೇನೆ
ಮತ್ತೆ ಯಥಾವತ್ತು ಹಿಂದಿನಂತೆ
ಚಿಕನ್ ತಂದೂರಿ,ಬಂಗುಡೆ ಫ್ರೈ
ಅಂದಾದರೂ ನಾ ನಿನ್ನ ದೂರದಿಂದ
ಕದ್ದುನೋಡಿದ್ದಷ್ಟೇ….ನೀನೂ ತೇಪೆಹಾಕಿದ
ಬೈಸಿಕಲ್ಲಿನ ಹವಾ ನೋಡುವ ನೆಪಮಾಡಿ
ಮುರ್ಕಿಯಲ್ಲಿ ದೃಷ್ಟಿ ಕೂಡಿಸಿದ್ದಷ್ಟೇ…
ಇವಕ್ಕೂ ಮೀರಿ ಹೇಳಿಕೊಳ್ಳುವಂಥದ್ದು
ಇನ್ನೇನು ಇತ್ತು ಹೇಳು ನಮ್ಮಿಬ್ಬರ ಮಧ್ಯೆ…?
ಅಲ್ಲೆಲ್ಲೋ ಮಹಾನಗರಗಳಲ್ಲಿ
ಇಲ್ಲಿಂದ ಹೋದವರೇ
ಲಿವ್ ಇನ್ ರಿಲೇಶನ್ ಶಿಪ್ಪಿನಲ್ಲಿರುತ್ತಾರಂತೆ
ಬರೇ ಇಪ್ಪತ್ತರ ಆಸುಪಾಸಿನವರು
ನಾಲ್ಕಾರು ವರ್ಷ ಜೊತೆಯಲ್ಲಿದ್ದು
ಸಾಕಾದರೆ ಟಪ್ಪನೆ ಬೇಪ೯ಡುತ್ತಾರಂತೆ
ಹಿಂದಿನ ಕುರುಹೇ ಇಲ್ಲದೇ
ಬೀಜ ಭೂಮಿಯಾಗುತ್ತಾರಂತೆ
ಇನ್ಯಾರದೋ ಕಸುವಿಗೆ
ಬದಲಾಗುತ್ತಿರುವುದು ಕಾಲವೋ..ಮನುಷ್ಯನೋ..
ಎಂದು ಚಿಂತಿಸುತ್ತಲೇ
ಪುಳಕ ರೋಮಾಂಚನಗಳೆಲ್ಲ ಸತ್ತು
ಮುಟ್ಟು ನಿಲ್ಲುವ ವಯಸ್ಸಿನಲ್ಲಿ
ಮತ್ತೆ ಮತ್ತೆ ಅಂದುಕೊಳ್ಳುತ್ತಿದ್ದೇನೆ
ಅಪ್ಪಿ ತಪ್ಪಿ ನಾವಿಬ್ಬರೂ ಇಂದು
ಭೇಟಿಯಾದರೂ ಆಗಬಹುದು
ಇಪ್ಪತ್ತು ವರ್ಷಗಳ ನಂತರ ಕೆನ್ನೆಗಳಲ್ಲಿ
ಇನ್ನೊಮ್ಮೆ ಓಕುಳಿ ನೀರು ಚಲ್ಲಾಡಬಹುದು
-ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ
*****