ನವದೆಹಲಿ, ಡಿ.22: ಹಿರಿಯ ಸಾಹಿತಿ ಡಾ. ಮೂಡ್ನಾಕೂಡ ಚಿನ್ನಸ್ವಾಮಿ ಅವರ ಬಹುತ್ವ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಗೆ 2022 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಗುರುವಾರ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಿದೆ.
ಅನುವಾದ ಪ್ರಶಸ್ತಿಗೆ ಪದ್ಮರಾಜ ದಂಡಾವತಿ ಅವರು ಅನುವಾದಿಸಿದ ‘ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿ ಆಯ್ಕೆಯಾಗಿದೆ.
ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಅನುವಾದ ಪ್ರಶಸ್ತಿ ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ.ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಈ ಪ್ರಶಸ್ತಿ ಆಯ್ಕೆಯು ನಡೆಯಿತು.
ಅನುವಾದ ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಜಗದೀಶ್ ಕೊಪ್ಪ, ಕಮಲಾಕರ ಭಟ್ಟ ಹಾಗೂ ಮೋಹನ್ ಕುಂಟಾರ ಕೆಲಸ ನಿರ್ವಹಿಸಿದ್ದರೆ ಮುಖ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಡಾ. ಸಿ. ನಾಗಣ್ಣ, ಪದ್ಮರಾಜ ದಂಡಾವತಿ ಹಾಗೂ ಚಂದ್ರಶೇಖರ ವಸ್ತ್ರದ ಅವರು ಜ್ಯೂರಿಗಳಾಗಿದ್ದರು.
ಪ್ರಶಸ್ತಿಗಳನ್ನು ೨೦೨೩ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಅಭಿನಂದನೆ: ಲಡಾಯಿ ಪ್ರಕಾಶನ ಬಹುತ್ವ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಯನ್ನು ಪ್ರಕಟಿಸಿದ್ದು ಇತ್ತೀಚೆಗೆ ಮೂರನೇ ಮುದ್ರಣ ಕಂಡಿದೆ.
ಸೂಕ್ಷ್ಮ ಸಂವೇದನೆಯ ಅದ್ಬುತ ಪ್ರತಿಭೆಯ ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಲಡಾಯಿ ಬಳಗ ಹಾಗೂ ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಅಭಿನಂದಿಸಿವೆ.
*****